
ಮೂಡಲಗಿ: ‘ಬೇಡಿದ್ದು ಕೊಡುವ ಮತ್ತು ಭಾಗ್ಯವ ತರುವ ಲಕ್ಷ್ಮೀದೇವಿ’ ಎಂದು ಭಕ್ತರ ಮನದಲ್ಲಿ ನೆಲೆಯೂರಿರುವ ಮೂಡಲಗಿ ತಾಲ್ಲೂಕಿನ ಕಮಲದಿನ್ನಿಯ ಲಕ್ಷ್ಮೀದೇವಿಯ ಜಾತ್ರೆಯ ಪಲ್ಲಕ್ಕಿ ಉತ್ಸವವು ಇದೇ ಫೆ.17ರಂದು ಜರುಗಲಿದೆ.
ಇಡೀ ಕಮಲದಿನ್ನಿ ಗ್ರಾಮವು ಲಕ್ಷ್ಮೀದೇವಿಯ ಪಲ್ಲಕ್ಕಿ ಸೇವೆಗೆ ಭಕ್ತಿಭಾವದಲ್ಲಿ ಸಜ್ಜಾಗಿದ್ದು, ಗ್ರಾಮದ ರಸ್ತೆಗಳು ಕಮಾನು, ಬ್ಯಾನರ್‌ಗಳಿಂದ ಅಲಂಕಾರಗೊಂಡು ಸ್ವಾಗತಕ್ಕೆ ಅಣಿಯಾಗಿವೆ.
ನೂರಾರು ವರ್ಷಗಳ ಪೂರ್ವ ಇತಿಹಾಸ ಇರುವ ಇಲ್ಲಿ ಲಕ್ಷ್ಮೀದೇವಿಯು ಘಟಪ್ರಭಾ ನದಿಯ ತಟದಲ್ಲಿ ಕಲ್ಲು ರೂಪದಲ್ಲಿ ಉದ್ಭವಗೊಂಡಿದೆ. ಅದೇ ಸ್ಥಳದಲ್ಲಿ ಕಮಲದಿನ್ನಿ ಗ್ರಾಮವಾಯಿತು. ಗ್ರಾಮದ ಪೂರ್ವರು ಉದ್ಭವಗೊಂಡಿದ್ದ ಕಲ್ಲನ್ನು ಲಕ್ಷ್ಮೀ ರೂಪದಲ್ಲಿ ನಿತ್ಯ ಭಕ್ತಿಯಿಂದ ಪೂಜಿಸಿಕೊಂಡು ಬಂದಿದ್ದಾರೆ. ಅದೇ ಸ್ಥಳದಲ್ಲಿ ಗದ್ದುಗೆಯನ್ನು ನಿರ್ಮಿಸಿದ್ದರು. ಪಕ್ಕದಲ್ಲಿ ಹರಿಯುವ ಘಟಪ್ರಭಾ ನದಿಗೆ ಆಗಾಗ್ಗೆ ಪ್ರವಾಹ ಬಂದು ಮನೆಗಳೆಲ್ಲ ಜಲಾವೃತಗೊಳ್ಳುತ್ತಿದ್ದವು. ಊರಿನ ಹಿರಿಯರೆಲ್ಲ ಸೇರಿ ನದಿ ದಂಡೆ ಮೇಲೆ ಇದ್ದ ಊರನ್ನು ಒಂದು ಕಿ.ಮೀ. ಅಂತರದಲ್ಲಿ ಸ್ಥಳಾಂತರಗೊಳಿಸಿ ಮನೆಗಳನ್ನು ಸ್ಥಳಾಂತರಗೊಂಡ ಸ್ಥಳದಲ್ಲಿ ಕಟ್ಟಿಸಿಕೊಂಡರು.
ಗಿಡಗಂಟಿಯ ಮಧ್ಯದಲ್ಲಿ ಉಳಿದುಕೊಂಡಿದ್ದ ಲಕ್ಷ್ಮೀದೇವಿಯನ್ನು ಅಲ್ಲಿಂದ ಸ್ಳಳಾಂತರಿಸಬೇಕು ಎಂದು ಊರು ಹಿರಿಯರು ಕವಲಕಟ್ಟಿ ಕೇಳಿದರು. ಲಕ್ಷ್ಮೀದೇವಿಯು ‘ತಾನಿದ್ದ ಸ್ಥಳದಿಂದ ಕದಲುವುದಿಲ್ಲ, ವ್ಯರ್ಥ ಪ್ರಯತ್ನ ಮಾಡಬೇಡಿ. ನಾನು ಗಂಗೆಯ ಪಕ್ಕದಲ್ಲಿ ನೆಲೆಸುವೆ’ ಎಂದು ಹೇಳಿಕೆಯಾಗಿದ್ದರಿಂದ ಮೂಲ ಸ್ಥಳದಲ್ಲಿಯೇ ದೇವಿಯನ್ನು ಉಳಿಸಲು ನಿರ್ಧರಿಸಿದರು. ಮುಂದೆ ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಲು ಆರ್ಚಕರಾದ ಪೂಜೇರಿ ಕುಟುಂಬದವರು ಸಿದ್ಧರಾದರು. ದೇವರ ಕೆಲಸಕ್ಕೆ ಹತ್ತಾರು ದೈವಭಕ್ತರ ಕೈಗಳು ಸೇರುತ್ತವೆ ಎನ್ನುವಂತೆ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮದ ಅನೇಕ ಭಕ್ತರು ಭಕ್ತಿ ಕಾಣಿಕೆಯನ್ನು ನೀಡಲು ಮುಂದೆ ಬಂದರು. ನೋಡು ನೋಡುತ್ತಿದ್ದಂತೆ 2001ರಲ್ಲಿ ಲಕ್ಷ್ಮೀದೇವಿಗೆ ಸುಂದರವಾದ ದೇವಸ್ಥಾನ ನಿರ್ಮಾಣಗೊಂಡಿತು. 2002ರಿಂದ ಲಕ್ಷ್ಮೀದೇವಿಯ ಭವ್ಯರೀತಿಯಲ್ಲಿ ಜಾತ್ರೆಯನ್ನು ಮಾಡಿಕೊಂಡು ಬಂದಿರುವರು.
ಸಿರಿವಂತಿಕೆ: ಕೃಷಿಯೇ ಮುಖ್ಯವಾಗಿರುವ ಕಮಲದಿನ್ನಿ ಗ್ರಾಮದಲ್ಲಿ ಶೇ. 90ರಷ್ಟು ಭೂಮಿಯಲ್ಲಿ ಕಬ್ಬು ಬೆಳೆಯುತ್ತಾರೆ. ಗ್ರಾಮದ ಇಡೀ ಭೂಮಿಯೆಲ್ಲ ವರ್ಷವಿಡೀ ಹಚ್ಚುಹಸಿನಿಂದ ಕಂಗೋಳಿಸುತ್ತಿರುವುದರಿಂದ ಹಸಿರು ಸೀರೆ ಧರಿಸಿ ಲಕ್ಷ್ಮೀದೇವಿ ಬರುವಳು ಎಂದು ಇಲ್ಲಿಯ ರೈತಾಪಿ ಜನರು ನಂಬಿಕೊಂಡು ಬಂದಿದ್ದಾರೆ. ತಾವು ಬೆಳೆದಿದ್ದ ದವಸ, ಧಾನ್ಯ, ಬೆಲ್ಲ, ಹೈನು ಹೀಗೆ ಏನೆ ದೊರೆಯಲಿ, ಮೊದಲು ದೇವಿಗೆ ಅರ್ಪಿಸುವರು. ಜಾತ್ರೆಯ ಅಂಗವಾಗಿ ತಮ್ಮ ಇಷ್ಟಿತಾರ್ಥ ಇಡೇರಿಕೆಗಾಗಿ ಉರುಳು ಸೇವೆ, ದೀರ್ಘದಂಡ ನಮಸ್ಕಾರ ವೃತ ಪಾಲಿಸುವರು. ಲಕ್ಷ್ಮ್ಮೀ ನೆಲೆಸಿರುವ ಕಮಲದಿನ್ನಿಯು ಸಿರಿವಂತರ ಊರು ಎನ್ನುವ ಹೆಗ್ಗಳಿಕೆ ಪಡೆದಿದೆ. ಗ್ರಾಮದ ಜನರಲ್ಲಿ ಒಗ್ಗಟ್ಟು ಸೌಹರ್ದತೆ ಇದ್ದು ಜಾತ್ರೆಯನ್ನು ಎಲ್ಲ ಸಮಾಜದವರು ಸೇರಿ ವೈಭವದಿಂದ ಮಾಡುತ್ತಾರೆ.
ಜಾತ್ರೆಯ ಅಂಗವಾಗಿ ಫೆ. 8ರಿಂದ ಪ್ರತಿ ದಿನ ಕಬಡ್ಡಿ, ಬ್ಯಾಡ್ಮಿಂಟನ್, ಕ್ರಿಕೆಟ್, ತೆರೆಬಂಡಿ ವಿವಿಧ ಸ್ಪರ್ಧೆಗಳು ನಡೆಯುತ್ತಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.