
ಬೆಳಗಾವಿ: ‘ಮುತ್ಯಾನಟ್ಟಿಗೆ 24x7 ಮಾದರಿಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ 5 ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಾಗಾರ ನಿರ್ಮಿಸಲಾಗಿದೆ. ಇದರಿಂದಾಗಿ ಈ ಭಾಗದ ಜನರು ಹಲವು ದಶಕಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ನೀಗಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರ ಹೊರವಲಯದ ಮುತ್ಯಾನಟ್ಟಿಯಲ್ಲಿ ನಿರ್ಮಿಸಿದ ಜಲ ಸಂಗ್ರಹಾಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮುತ್ಯಾನಟ್ಟಿಯಲ್ಲಿ 600 ಮನೆಗಳಿವೆ. ವಿಶ್ವ ಬ್ಯಾಂಕ್ ನೆರವಿನಿಂದ ಹೊಸ ತಂತ್ರಜ್ಞಾನ ಬಳಸಿ ಕೈಗೊಂಡಿರುವ ಈ ಕಾಮಗಾರಿಯಿಂದ ಜನರಿಗೆ ಅನುಕೂಲವಾಗಲಿದೆ. ವಿದ್ಯುತ್ ಸಂಪರ್ಕ ಇರದಿದ್ದರೂ ಇಳಿಜಾರಿನಲ್ಲಿ ಇರುವ ಪ್ರದೇಶಗಳ ಮನೆಗಳಿಗೆ ನೀರು ಪೂರೈಕೆಯಾಗಲಿದೆ’ ಎಂದರು.
‘ಮುತ್ಯಾನಟ್ಟಿ ಮಾತ್ರವಲ್ಲ; ಬೆಳಗಾವಿ ಮಹಾನಗರದ ವಿವಿಧ ಬಡಾವಣೆಗಳಲ್ಲಿನ ನೀರಿನ ಕೊರತೆ ನೀಗಿಸಲು ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ವಿರೋಧ ಪಕ್ಷದವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಏನೆಲ್ಲ ಟೀಕೆ ಮಾಡುತ್ತಾರೆ. ಆದರೆ, ನಮ್ಮ ಸರ್ಕಾರ ಬಡವರ ಪರವಾಗಿದೆ, ಜನರ ಪರವಾಗಿದೆ’ ಎಂದು ಹೇಳಿದರು.
ಶಾಸಕ ಆಸಿಫ್ ಸೇಠ್, ‘ಒಂದೂವರೆ ದಶಕದ ಹಿಂದೆ ಮುತ್ಯಾನಟ್ಟಿಯಲ್ಲಿ ಹನಿ ನೀರಿಗೆ ಪರದಾಡುವ ಸ್ಥಿತಿ ಇತ್ತು. ಆಗ ಶಾಸಕರಾಗಿದ್ದ ಫಿರೋಜ್ ಸೇಠ್ ಕೆಲವೆಡೆ ಕೊಳವೆಬಾವಿ ಕೊರೆಯಿಸಿ, ಒಂದಿಷ್ಟು ಸಮಸ್ಯೆ ನೀಗಿಸಿದ್ದರು. ಈಗ ಜಲ ಸಂಗ್ರಹಾಗಾರ ನಿರ್ಮಿಸಿ, ಜಲಬವಣೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ’ ಎಂದರು.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ(ಕೆಯುಐಡಿಎಫ್‌ಸಿ) ಅಧ್ಯಕ್ಷ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿದರು.
ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಮಹಾನಗರ ಪಾಲಿಕೆ ಆಯುಕ್ತ ಎಂ.ಕಾರ್ತಿಕ, ಕೆಯುಐಡಿಎಫ್‌ಸಿ ಮುಖ್ಯ ಎಂಜಿನಿಯರ್ ಜಿ.ಆರ್.ನಂದೀಶ ಇತರರಿದ್ದರು.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಆದರೆ, ಕಾಂಗ್ರೆಸ್‌ನ ಶಾಸಕರು ಮತ್ತು ಮುಖ್ಯಮಂತ್ರಿ ಮಧ್ಯೆ ಯಾವುದೇ ಜಟಾಪಟಿ ನಡೆದಿಲ್ಲ.–ಬೈರತಿ ಸುರೇಶ್, ಸಚಿವ
ಮುತ್ಯಾನಟ್ಟಿಯಲ್ಲಿ ಹಾಳಾಗಿರುವ ರಸ್ತೆ ಅಭಿವೃದ್ಧಿಪಡಿಸುವ ಜತೆಗೆ, ಚರಂಡಿ ನಿರ್ಮಿಸಲಾಗುತ್ತಿದೆ. ಬೀದಿದೀಪಗಳನ್ನು ಅಳವಡಿಸಲಾಗುತ್ತಿದೆ.–ಆಸಿಫ್ ಸೇಠ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.