ಹುಕ್ಕೇರಿ: ಮಳೆಗಾಲದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಯ ಮುಖ್ಯಸ್ಥರು ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಅನುಷ್ಟಾನ ಅಧಿಕಾರಿ, ಪಿಡಿಒ ಮತ್ತು ಜನಪ್ರತಿನಿಧಿಗಳಿಗೆ ಶಾಸಕ ನಿಖಿಲ್ ಕತ್ತಿ ಸಲಹೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ 4ನೇ ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲಿಸಿ ಶುಕ್ರವಾರ ಮಾತನಾಡಿದರು.
ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಜರಗುತ್ತಿರುವ ಜಲ ಜೀವನ ಮಿಷನ್ (ಜೆ.ಜೆ.ಎಂ) ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಎಇಇ ವಿನಾಯಕ ಪೂಜೇರಿಗೆ ಸೂಚಿಸಿದರು.
ಕೆಡಿಪಿ ನಾಮನಿರ್ದೆಶನ ಸದಸ್ಯ ಬಸವರಾಜ ಕೋಳಿ ಮಾತನಾಡಿ, ಗ್ರಾಮಿಣ ಪ್ರದೇಶದಲ್ಲಿ ಜೆಜೆಎಂ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಪ್ರತಿ ಮನೆಗೆ ಎಂದು ಶುದ್ಧ ಕುಡಿಯುವ ನೀರು ದೊರೆಯುವದು ಎಂದು ಪ್ರಶ್ನಿಸಿದಾಗ, ಎಇಇ ವಿನಾಯಕ ಪೂಜೆರಿ ಮಾತನಾಡಿ, ಈಗಾಗಲೇ ಮೊದಲನೇ ಹಂತದ ಕಾಮಗಾರಿ ಮುಕ್ತಾಯವಾಗಿ, 2ನೇ ಹಂತದಲ್ಲಿವೆ. ಆದರೆ, ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆಯ ವಿಳಂಬವೇ ಇದಕ್ಕೆ ಕಾರಣ. ಇದರಿಂದ ಕಾಮಗಾರಿಗಳು ನಿಧಾನ ಹಂತದಲ್ಲಿ ಸಾಗಿವೆ ಎಂದರು.
ಶಾಸಕ ಕತ್ತಿ ಮಾತನಾಡಿ, ಗುತ್ತಿಗೆದಾರರಿಗೆ ಹಣ ಸಂದಾಯವಾಗಿಲ್ಲ ಎಂದು ಕಾಮಗಾರಿ ನಿಲ್ಲಬಾರದು. ಗುತ್ತಿಗೆದಾರರು ತಮಗೆ ನೀಡಿದ ಕಾಮಗಾರಿ ಪೂರ್ಣಮಾಡಿ ಆಯಾ ಪಿಡಿಒಗಳಿಗೆ ಹಸ್ತಾಂತರಿಸಬೇಕು. ತಮ್ಮ ಟೆಂಡರ ಹಣದ ಬಗ್ಗೆ ಸರ್ಕಾರ ಮಟ್ಟದಲ್ಲಿ ತಾವು ಚರ್ಚಿಸುವುದಾಗಿ ತಿಳಿಸಿದರು.
ಯುಜಿಡಿ ಕಾಮಗಾರಿ ಬಗ್ಗೆ ಅಸಮಾಧಾನ: ಪಟ್ಟಣದಲ್ಲಿ ಕೈಗೊಂಡ ಯುಜಿಡಿ ಕಾಮಗಾರಿಯಿಂದ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ಕುರಿತು ಸಭೆಯಲ್ಲಿ ಶಾಸಕ ಕತ್ತಿ ಚರ್ಚಿಸಿ, ಜನರಿಂದ ಬರುತ್ತಿರುವ ದೂರು ಕೇಳಿ ತಮಗೆ ಅಸಮಾಧಾನವಾಗಿದೆ ಎಂದರು.
ಸಂಬಂಧಿತ ಅಧಿಕಾರಿಯಿಂದ ಉತ್ತರ ಪಡೆದು ಬೇಗನೆ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸೂಚಿಸಿದರು.
ಕೃಷಿ ಇಲಾಖೆ ಬಗ್ಗೆ ಎಡಿಎ ಆರ್.ಬಿ.ನಾಯ್ಕರ್, ತೋಟಗಾರಿಕೆ ಇಲಾಖೆ ಕುರಿತು ಎಡಿಎಚ್ ಎಂ.ಆರ್.ಕಳ್ಳಿಮನಿ, ಪಂಚಾಯತ್ ರಾಜ್ ಇಲಾಖೆ ಬಗ್ಗೆ ಎಇಇ ಶಸಿಕಾಂತ ವಂದಾಳೆ, ಪಶು ಸಂಗೋಪನೆ ಬಗ್ಗೆ ಎಡಿಎಎಚ್ ರಮೇಶ್ ಕದಮ್, ಆರೋಗ್ಯ ಇಲಾಕೆ ಕುರಿತು ಟಿಎಚ್ಒ ಡಾ.ಉದಯ ಕುಡಚಿ, ಶಿಕ್ಷಣ ಇಲಾಖೆ ಬಗ್ಗೆ ಬಿಇಒ ಪ್ರಭಾವತಿ ಪಾಟೀಲ್ ಸಭೆಗೆ ವಿವರ ನೀಡಿದರು.
ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಯೂ ಆದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳಿ, ತಹಶೀಲ್ದಾರ್ ಮಂಜುಳಾ ನಾಯಕ, ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್ ಮಲ್ಲಾಡದ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ ಪೂರಕ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಅಧ್ಯಕ್ಷ ಶಾನೂಲ್ ತಹಸೀಲ್ದಾರ, ಪುರಸಭೆ ಸಿಒ ಈಶ್ವರ ಸಿದ್ನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ತಳವಾರ, ಸದಸ್ಯ ರಾಜು ಮುನ್ನೋಳಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ, ಕೆಡಿಪಿ ನಾಮನಿರ್ದೆಶನ ಸದಸ್ಯರಾದ ಬಸವರಾಜ ಕೋಳಿ, ಗುಲಾಬ್ ತಹಶೀಲ್ದಾರ್, ಸಿದ್ದಪ್ಪ ಖೋತ, ಕಲ್ಲಪ್ಪ ಕಟ್ಟಿ, ರಾಜು ಅವಟೆ, ಉಲ್ಲಾಸ ಕಾಪಸಿ, ಎಚ್ಆರ್ಇಸಿಎಸ್ ನಿರ್ದೇಶಕ ಕಲಗೌಡ ಪಾಟೀಲ್, ಆರ್.ಇ.ನೆಮಿನಾಥ ಖೆಮಲಾಪೂರೆ, ಸಂಕೇಶ್ವರ ಪಿಐ ಶಿವಶರಣ ಅವುಜಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕರಾದ ಗುರು ಕುಲಕರ್ಣಿ, ಶೀತಲ್ ಬ್ಯಾಳಿ, ಮುಖಂಡರಾದ ಚನ್ನಪ್ಪ ಗಜಬರ್, ಶಿವನಗೌಡ ಪಾಟೀಲ್, ಸ್ಥಳೀಯರು ಇದ್ದರು.ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ ಸ್ವಾಗತಿಸಿ ನಿರೂಪಿಸಿದರು. ಪಿಡಿಒ ಕಿರಣ ಅಂಬೇಕರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.