ನಿಪ್ಪಾಣಿ: ‘ಅಮೃತ-2 ಯೋಜನೆಯಡಿ ₹32 ಕೋಟಿಯಲ್ಲಿ ಹೊಸ ನೀರಿನ ಯೋಜನೆಯ ಕಾಮಗಾರಿ ಆರಂಭಗೊಳ್ಳಲಿದೆ. ಭವಿಷ್ಯದಲ್ಲಿ ನಗರಕ್ಕೆ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ಜವಾಹರ ಜಲಾಶಯವು ಪೂರ್ಣಮಟ್ಟದಲ್ಲಿ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
‘₹55 ಲಕ್ಷ ಅನುದಾನದಲ್ಲಿ ಪ್ರೆಶರ್ ಫಿಲ್ಟರ್ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಅಲ್ಲದೆ ಬೆಳಗಾವಿ ನಂತರ ಜಿಲ್ಲೆಯ ಅತಿ ದೊಡ್ಡ ನಗರವಾದ ನಿಪ್ಪಾಣಿಯಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಾಗಿನಿಂದ ಅನೇಕ ಸಮಸ್ಯೆಗಳು ಉಲ್ಬಣಗೊಂಡವು. ಅವುಗಳನ್ನು ಸರಿಪಡಿಸುವ ಕಾರ್ಯವೂ ನಡೆದಿದೆ. ನಗರದ ಸ್ವಚ್ಛತೆಗಾಗಿ ₹9.35 ಲಕ್ಷ ಅನುದಾನದಲ್ಲಿ ಟ್ರ್ಯಾಕ್ಟರ್ ಖರೀದಿಸಲಾಗಿದೆ. ಇಲ್ಲಿಯವರೆಗೆ ಕೋಟ್ಯಂತರ ಅನುದಾನ ತಂದಿದ್ದು ಭವಿಷ್ಯದಲ್ಲಿಯೂ ಕ್ಷೇತ್ರದ ಅಭಿವೃದ್ಧಿಗಾಗಿ ಅಪಾರ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದರು.
ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸ್ಥಾಯಿ ಸಮಿತಿ ಚೇರಮನ್ ಜಸರಾಜ ಗಿರೆ, ಸದಸ್ಯರು, ಪೌರಾಯುಕ್ತ ಗಣಪತಿ ಪಾಟೀಲ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ, ಸಂಚಾಲಕರು, ಸುನೀಲ ಪಾಟೀಲ, ಪ್ರವೀನ ಶಹಾ, ಉಮೇಶ ಯರನಾಳಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.