ADVERTISEMENT

ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳು

ಓಬಳಾಪೂರ ಗ್ರಾಮ ಸಭೆ; ಗ್ರಾಮಸ್ಥರಿಂದ ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 7:05 IST
Last Updated 20 ಜೂನ್ 2018, 7:05 IST
ರಾಮದುರ್ಗ ತಾಲ್ಲೂಕಿನ ಓಬಳಾಪೂರ ಗ್ರಾಮದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ರಾಮದುರ್ಗ ತಾಲ್ಲೂಕಿನ ಓಬಳಾಪೂರ ಗ್ರಾಮದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು   

ರಾಮದುರ್ಗ: ತಾಲ್ಲೂಕಿನ ಓಬಳಾಪೂರ ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಕೈಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಲು ಸಿಬ್ಬಂದಿ ತಡವರಿಸಿದ್ದರಿಂದ ಗ್ರಾಮಸಭೆ ಗೊಂದಲದ ಗೂಡಾಗಿ ಪರಿಣಮಿಸಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಂಕರ ಲಮಾಣಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಓಬಳಾಪೂರ ಗ್ರಾಮ ಪಂಚಾಯ್ತಿಯಲ್ಲಿ ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಒಪ್ಪಿಗೆ ಪಡೆಯಲು ಅನುಮತಿಸಲಾಯಿತು.

ಈ ವೇಳೆ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಪಾಟೀಲ ಸಭೆಯ ಮುಂದೆ ವಿಷಯ ಮಂಡಿಸುತ್ತಿದ್ದಂತೆ, ಕಳೆದ ಸಾಲಿನಲ್ಲಿ ಮಾಡಿರುವ ಕಾಮಗಾರಿ ಕುರಿತು ಸಭೆಗೆ ಮಾಹಿತಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ಹೊಸದಾಗಿ ಮಾಡಬಹುದಾದ ಕಾಮಗಾರಿಗಳ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಿ ಸಭೆಯ ಒಪ್ಪಿಗೆ ಪಡೆಯಲಾಯಿತು.

ADVERTISEMENT

ಸ್ವಚ್ಛ ಭಾರತ ಮಿಷನ್‌ದಡಿ ಓಬಳಾಪುರ ಗ್ರಾಮದಲ್ಲಿ ನಿರ್ಮಿಸಿದ ಶೌಚಾಲಯಗಳ ಮಾಹಿತಿ ನೀಡುವಂತೆ ಸಭೆಯಲ್ಲಿ ಆಗ್ರಹಿಸಿದಾಗ ಪಂಚಾಯ್ತಿ ಕಾರ್ಯದರ್ಶಿ ಸೇರಿದಂತೆ ಕೆಲ ಸಿಬ್ಬಂದಿ ಪರದಾಡಿದರು. ಸ್ವಲ್ಪ ಸಮಯ ಕೊಡಿ ಮಾಹಿತಿ ನೀಡುತ್ತೇವೆ ಎಂದು ಹೇಳಿ ಸಭೆ ಮುಗಿದರು ಮಾಹಿತಿ ನೀಡದೆ ಸಭೆಯನ್ನು ಅಂತ್ಯಗೊಳಿಸಿದರು.

14ನೆ ಹಣಕಾಸು ಯೋಜನೆಯ ಅಡಿಯಲ್ಲಿ ಮಾಡಿರುವ ಖರ್ಚು ವೆಚ್ಚದ ಮಾಹಿತಿ ಕೇಳಿದರೂ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದಾದರು. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರಿಗೆ ಮನೆಗಳು ಮಂಜೂರಾಗಿವೆ. ಇದಕ್ಕೆ ಅಧ್ಯಕ್ಷರೇ ಹೊಣೆ ಎಂದು ಓಬಳಾಪುರ ಆರ್‍ಎಲ್‌ಟಿ ಮತ್ತು ಸೊಪ್ಪಡ್ಲದ ಸದಸ್ಯರು ಅಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದರು.

ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ. ಪಂಚಾಯ್ತಿಯಲ್ಲಿ ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು
ಶೇಖರ ಹಿರೇಸೋಮನ್ನವರ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.