ಮಂಗೇಶ ಪವಾರ್
ಬೆಳಗಾವಿ: ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಂಗೇಶ ಪವಾರ್ ಹಾಗೂ ಜಯಂತ ಜಾಧವ ಅವರ ಮಹಾನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಲಾಗಿತ್ತು.
ಪಾಲಿಕೆಯಿಂದ ನಿರ್ಮಿಸಿದ ವಾಣಿಜ್ಯ ಮಳಿಗೆಗಳಲ್ಲಿ ಈ ಇಬ್ಬರೂ ತಮ್ಮ ಪತ್ನಿ ಹೆಸರಿನಲ್ಲಿ ಮಳಿಗೆ ಹೊಂದಿದ್ದಾರೆ ಎಂದು ಆರೋಪಿಸಿ ನೀಡಿದ ದೂರು ಆಧರಿಸಿ ಅನರ್ಹ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ನಗರಾಭಿವೃದ್ಧಿ ಇಲಾಖೆಯ ಅಯುಕ್ತರಿಗೆ ದೂರು ನೀಡಲಾಗಿತ್ತು. ಆದರೆ, ಅಲ್ಲಿಯೂ ಇಬ್ಬರ ಸದಸ್ಯತ್ವ ಅನೂರ್ಜಿತ ಮಾಡಲಾಗಿತ್ತು.
ನಂತರ ಇಬ್ಬರೂ ಸದಸ್ಯರು ಹೈಕೋರ್ಟ್ ಮೊರೆಹೋದರು. ಅಧಿಕಾರಿಗಳ ಕ್ರಮಕ್ಕೆ ಚಾಟಿ ಬೀಸಿದ ಹೈಕೋರ್ಟ್ ಸದಸ್ಯತ್ವ ರದ್ದತಿಯ ಆದೇಶಕ್ಕೆ ತಡೆ ನೀಡಿತು.
ಮೇಯರ್ ಚುನಾವಣೆ ಎರಡೇ ದಿನ ಬಾಕಿ ಇರುವಾಗ ಈ ಆದೇಶ ಹೊರಬಿತ್ತು.
ಅನರ್ಹಗೊಂಡಿದ್ದ ಮಂಗೇಶ ಅವರನ್ನೇ ಮೇಯರ್ ಮಾಡಬೇಕು. ಕಾಂಗ್ರೆಸ್ ಮಾತು ಕೇಳಿ ಅನರ್ಹಗೊಳಿಸಿದ ಅಧಿಕಾರಿಯಿಂದಲೇ ಮೇಯರ್ ಪ್ರಮಾಣ ಪತ್ರ ಕೊಡಿಸಬೇಕು ಎಂದು ಹಟ ಹಿಡಿದ ಶಾಸಕ ಅಭಯ ಪಾಟೀಲ ಅದನ್ನು ಸಾಧಿಸಿಯೇ ಬಿಟ್ಟರು.
ಇವರ ಪತ್ನಿ ಪಾಲಿಕೆ ಚುನಾವಣೆಗೂ ಎರಡು ವರ್ಷ ಮುಂಚೆಯೇ ಮಳಿಗೆಯನ್ನು ಹರಾಜಿನಲ್ಲಿ ಪಡೆದಿದ್ದಾರೆ. ಅದು ವಾಣಿಜ್ಯ ಚಟುವಟಿಕೆ. ಲಾಭದಾಯಕ ಹುದ್ದೆ ಅಲ್ಲ ಎಂದು ನ್ಯಾಯಾಲಯದಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು.
ಮಂಗೇಶ ಅವರನ್ನು ಅನರ್ಹಗೊಳಿಸಿದ್ದ ಪ್ರಾದೇಶಿಕ ಆಯಕ್ತ ಸಂಜಯ ಶೆಟ್ಟೆಣ್ಣವರ ಅವರೇ ಶನಿವಾರ ಅವರಿಗೆ ಮೇಯರ್ ಪ್ರಮಾಣ ಪತ್ರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.