ಅಥಣಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ತನಕ ನಮ್ಮ ಸಮಾಜದವರು ಮಿಸಲಾತಿ ಕೇಳುವುದಿಲ್ಲ ಎಂದು ಕೂಡಲಜ ಸಂಗಮ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ವಿಜಯಪುರದಲ್ಲಿ ಜುಲೈ 13 ರಂದು ಜರುಗುವ ವಕೀಲರ ಪರಿಷತ್ತಿನ ಕಾರ್ಯಕ್ರಮದ ಅಂಗವಾಗಿ ಅಥಣಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
’ಈ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮ ಹೋರಾಟ ಹತ್ತಿಕುವ ಸಲುವಾಗಿ ನಮ್ಮಮೇಲೆ ಲಾಠಿ ಚಾರ್ಜ್ ಮಾಡಿಸಿದೆ. ಆದ್ದರಿಂದ ನಾವು ಅವರ ಬಳಿ ಮಿಸಲಾತಿ ಕೇಳುವುದಿಲ್ಲ ಎಂದು ಹೇಳಿದರು.
ಬೆಳಗಾವಿ ಚಳಿಗಾಲದ ಅಧಿವೇಶನ ವೇಳೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತರಲು ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು ಹೈಕೋರ್ಟ್ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾನೂನು ಬಾಹಿರವಾಗಿ ಪೊಲಿಸರಿಗೆ ಕುಮ್ಮಕ್ಕು ಕೊಟ್ಟು ಪ್ರತಿಭಟನಾಕಾರರ ಮೇಲೆ ಮಾರಣಾಂತಿಕ ಹಲ್ಲೆಯನ್ನ ಸರ್ಕಾರ ಮಾಡಿಸಿತ್ತು. ಅಧಿಕಾರಿಗಳನ್ನ ಅಮಾನತು ಮಾಡಬೇಕೆಂದು ನಾವು ಆಗ್ರಹಿಸಿದ್ದೇವು. ಸಮಾಜದ ನಾಯಕರು ಅಧಿವೇಶನದಲ್ಲಿ ಪೊಲಿಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು. ಆದರೆ ರಾಜ್ಯ ಸರಕಾರ ಇದಕ್ಕೆ ಸ್ಪಂದನೆ ಮಾಡಲಿಲ್ಲ. ನಂತರ 9 ದಿನಗಳ ಸತ್ಯಾಗ್ರಹ ಮಾಡಿ ಆಗ್ರಹಿಸಿದ್ದೆವು. ಅದಕ್ಕೂ ರಾಜ್ಯ ಸರ್ಕಾರ ಕ್ಯಾರೆ ಅನ್ನಲಿಲ್ಲ ಎಂದರು.
ಹಿರಿಯ ವಕೀಲ ಬಿ.ಎಲ್.ಪಾಟೀಲ ಮಾತನಾಡಿ, ಮುಂದಿನ ಹೋರಾಟ ತುಂಬಾ ಕಷ್ಟಮಯವಾಗಿದೆ. ಆದ್ದರಿಂದ ನಮ್ಮ ಸಮಾಜದ ಸಂಪೂರ್ಣವಾಗಿ ಗಟ್ಟಿಯಾಗಬೇಕಾಗಿದೆ. ಶ್ರೀಗಳು ನಮಗಾಗಿ ಹೋರಾಟ ಮಾಡುತ್ತಿದ್ದಾರೆ ಅವರ ಹೋರಾಟಕ್ಕೆ ನಾವು ಸದಾ ಕಾಲ ಬೆಂಬಲವಾಗಿರಬೇಕು ಎಂದರು.
ಶಶಿಕಾಂತ ಗುರೂಜಿ, ಪ್ರಕಾಶ ಕುಮಠಳ್ಳಿ, ವಕೀಲ ಎ.ಎ.ಹುದ್ದಾರ, ಸುಭಾಷ ನಾಯಿಕ , ಸುನೀಲ ಸಂಕ, ಮಲ್ಲಿಕಾರ್ಜುನ ದುಂಡಿ ,ಡಿ.ಬಿ.ಠಕ್ಕಣ್ಷವರ ಮಾತನಾಡಿದರು , ಬಾಳೇಶ ಬಿಸಲಾಪುರ ಸ್ವಾಗತಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.