ADVERTISEMENT

ರೈತ, ಕಾರ್ಮಿಕರ ಕವಾಯತಿಗೆ ಬೆಳಗಾವಿಯಿಂದ 50 ಟ್ರ್ಯಾಕ್ಟರ್

ಜ.23ರಂದು ರಾಣಿ ಚನ್ನಮ್ಮ ವೃತ್ತದಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 8:34 IST
Last Updated 16 ಜನವರಿ 2021, 8:34 IST

ಬೆಳಗಾವಿ: ‘ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಮುಂದುವರಿದಿರುವ ರೈತ ಚಳವಳಿ ಬೆಂಬಲಿಸಿ ಗಣರಾಜ್ಯೋತ್ಸವ ದಿನವಾದ ಜ.26ರಂದು ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳ ಸಮನ್ವಯ ಸಮಿತಿ ‘ಸಂಯುಕ್ತ ಹೋರಾಟ–ಕರ್ನಾಟಕ’ ನೇತೃತ್ವದಲ್ಲಿದೊಡ್ಡಮಟ್ಟದ ಪರ್ಯಾಯ ಕವಾಯತು ನಡೆಯಲಿದ್ದು, ಬೆಳಗಾವಿಯಿಂದ 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ತೆರಳಿ ಸೇರಲಿದ್ದೇವೆ’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

‘ಸಂಯುಕ್ತ ಹೋರಾಟ–ಕರ್ನಾಟಕ’ ಜಿಲ್ಲಾ ಘಟಕದಿಂದ ಜ.23ರಂದು ಬೆಳಿಗ್ಗೆ 10ಕ್ಕೆ ರಾಣಿ ಚನ್ನಮ್ಮ ವೃತ್ತದಿಂದ ವಾಹನಗಳ ಮೆರವಣಿಗೆಗೆ ಚಾಲನೆ ನೀಡಲಾಗುವುದು. 25ರಂದು ತುಮಕೂರಿನ ಸಿದ್ಧಗಂಗಾ ಮಠ ತಲುಪಲಿದೆ. 26ರಂದು ಬೆಳಿಗ್ಗೆ ಕವಾಯತು ನಿಗದಿಯಾಗುವ ಸ್ಥಳ ತಲುಪಲಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರವು ರೈತರು ಹಾಗೂ ದುಡಿಯುವ ವರ್ಗವನ್ನು ಬೀದಿ ಪಾಲು ಮಾಡುತ್ತಿದೆ. ವಿವಾದಿತ ಕೃಷಿ ಕಾಯ್ದೆಗಳ ವಾಪಸ್‌ಗೆ ಆಗ್ರಹಿಸಿ ದೆಹಲಿಯ ಗಡಿಯಲ್ಲಿ ವ್ಯಾಪಕ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಹಟಮಾರಿ ಧೋರಣೆ ತೋರುತ್ತಿರುವುದು ಖಂಡನೀಯ. ನಿಜವಾಗಿಯೂ ಕೃಷಿಕರ ಬಗ್ಗೆ ಕಾಳಜಿ ಇದ್ದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಕೈಬೊಂಬೆ ಆಗುವುದನ್ನು ಬಿಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ವ್ಯಾಪಾರಿ ಮನೋಭಾವ ಸರಿಯಲ್ಲ’ ಎಂದರು.

‘ರೈತರು, ಶೋಷಿತ ವರ್ಗದವರು, ಕಾರ್ಮಿಕರು, ಯುವಜನರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಎಲ್ಲ ದೇಶಪ್ರೇಮಿಗಳು ಈ ಚಳವಳಿ ನಮ್ಮದೆಂದು ಭಾವಿಸಿ ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಬೇಕು. ತಮ್ಮ ತಮ್ಮ ವಾಹನಗಳಲ್ಲಿ ಬಂದು ಕವಾಯತಿನಲ್ಲಿ ಭಾಗವಹಿಸಿ, ಅನ್ನದಾತರ ನೆರವಿಗೆ ಬರಬೇಕು’ ಎಂದು ಕೋರಿದರು.

ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ, ವಿವಿಧ ಸಂಘಟನೆಗಳ ಮುಖಂಡರಾದ ನಾಗೇಶ ಸಾತೇರಿ, ಅಖಿಲಾ ಪಠಾಣ, ಆರ್.ಎಸ್. ದರ್ಗೆ, ಶಿವಲೀಲಾ ಮಿಸಾಳೆ ಹಾಗೂ ರವಿ ಪಾಟೀಲ ಇದ್ದರು.

***

ಬೇಡಿಕೆಗಳು

* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಜನವಿರೋಧಿ ಕಾಯ್ದೆಗಳನ್ನು ಮತ್ತು ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಕೂಡಲೇ ಕೈಬಿಡಬೇಕು.

* ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸಬೇಕು.

* ಎಪಿಎಂಸಿಗಳನ್ನು ಉಳಿಸಿ, ರೈತ ಸ್ನೇಹಿಯಾಗಿ ಬಲಪಡಿಸಬೇಕು.

* ದಶಕಗಳಿಂದ ಅರ್ಜಿ ಹಾಕಿ ಕಾಯುತ್ತಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಮತ್ತು ಬಡವರಿಗೆ ಹಕ್ಕುಪತ್ರ ನೀಡಬೇಕು.

* ಉಳುವವರಿಗೇ ಭೂಮಿ ನೀತಿ ಮುಂದುವರಿಸಬೇಕು.

* ಎಲ್ಲ ವಸತಿರಹಿತರಿಗೆ ನಿವೇಶನ ಹಕ್ಕು ಕಲ್ಪಿಸಬೇಕು.

* ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕೊಡಬೇಕು.

* ಬರ ಮತ್ತು ನೆರೆಪೀಡಿತ ಪ್ರದೇಶಗಳವರಿಗೆ ಪರಿಹಾರ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.

* ಎಲ್ಲ ಕಾರ್ಮಿಕರಿಗೂ ಉದ್ಯೋಗ ಮತ್ತು ವೇತನ ಭದ್ರತೆ ಒದಗಿಸಬೇಕು.

* ಓದಿಗೆ ತಕ್ಕ ಉದ್ಯೋಗ, ಸಮಾನ ಕೆಲಸಕ್ಕೆ ಸಮಾನ ವೇತನ ನೀತಿ ಜಾರಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.