ADVERTISEMENT

‘ಪರೀಕ್ಷಾ ಪೇ ಚರ್ಚಾ‘ ನಾಳೆ: ಜಿಲ್ಲೆಯ ಇಬ್ಬರು ಆಯ್ಕೆ- ಡಿಸಿ ಎಂ.ಜಿ. ಹಿರೇಮಠ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 19:30 IST
Last Updated 30 ಮಾರ್ಚ್ 2022, 19:30 IST

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ‘ಪರೀಕ್ಷಾ ಪೇ ಚರ್ಚಾ’ 5ನೇ ಆವೃತ್ತಿ‌‌ಯ ಕಾರ್ಯಕ್ರಮವು ಏ.1ರಂದು ಬೆಳಿಗ್ಗೆ 11ರಿಂದ ಆರಂಭವಾಗಲಿದ್ದು, ಜಿಲ್ಲೆಯ ಇಬ್ಬರು ಆನ್‌ಲೈನ್‌ನಲ್ಲಿ ಸಂವಾದ ನಡೆಸಲು ಆಯ್ಕೆಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ನಗರದ ಕೇಂದ್ರೀಯ ವಿದ್ಯಾಲಯ–3ರ ಶ್ರೇಯಸ್ ಮಾರ್ಗನಕೊಪ್ ಮತ್ತು ಕೇಂದ್ರೀಯ ವಿದ್ಯಾಲಯ 1ರ ಜಾನವಿ ದ್ವಿವೇದಿ ಆಯ್ಕೆಯಾದವರು. ಜಿಲ್ಲೆಯ ಇತರ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ವರ್ಚುವಲ್ ವೇದಿಕೆ ಮೂಲಕ ಪಾಲ್ಗೊಳ್ಳಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

‘ಇದು ಬಹುನಿರೀಕ್ಷಿತ ವಾರ್ಷಿಕ ಕಾರ್ಯಕ್ರಮವಾಗಿದ್ದು, ಪ್ರಧಾನ ಮಂತ್ರಿ ಅವರು ಪರೀಕ್ಷಾ ಒತ್ತಡಕ್ಕೆ ಸಂಬಂಧಿಸಿದ ಮತ್ತು ಪರೀಕ್ಷೆ ಕುರಿತು ವಿದ್ಯಾರ್ಥಿಗಳು ಎದುರಿಸುವ ಪ್ರಶ್ನೆಗಳಿಗೆ ನೇರಪ್ರಸಾರದ ಮೂಲಕ ಉತ್ತರಿಸಲಿದ್ದಾರೆ. ಕೋವಿಡ್-19 ಜಾಗತಿಕ ಸಾಂಕ್ರಾಮಿಕದಿಂದ ಹೊರಬರುತ್ತಿರುವ ಮತ್ತು ಪರೀಕ್ಷೆಗಳು ಮೊದಲಿನಂತೆ ಆಫ್‌ಲೈನ್‌ಗೆ ಮರಳುತ್ತಿರುವ ಕಾಲಘಟ್ಟದಲ್ಲಿ ಈ ವರ್ಷದ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ’ ಎಂದರು.

ADVERTISEMENT

‘ಪ್ರಧಾನಿ ಅವರ ಬಳಿ ಪ್ರಶ್ನೆ ಕೇಳುವ ಅವಕಾಶವಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಪಟ್ಟಿಯನ್ನು ಆನ್‌ಲೈನ್ ಮೂಲಕ ನಡೆಸಿದ ವಿವಿಧ ವಿಷಯಗಳ ಕುರಿತ ಸೃಜನಾತ್ಮಕ ಬರವಣಿಗೆ ಸ್ಪರ್ಧೆ ಆಧಾರದಲ್ಲಿ ತಯಾರಿಸಲಾಗಿದೆ. 2021ರ ಡಿ.28ರಿಂದ 2022ರ ಫೆ. 3ರವರೆಗೆ ‘ಮೈಗವ್’ ಜಾಲತಾಣದ ವೇದಿಕೆ ಮೂಲಕ ಸ್ಪರ್ಧೆ ಆಯೋಜಿಸಲಾಗಿತ್ತು’ ಎಂದು ತಿಳಿಸಿದರು.

ಡಿಡಿಪಿಐ ಬಸವರಾಜ ನಾಲತವಾಡ, ಕೇಂದ್ರೀಯ ವಿದ್ಯಾಲಯಗಳ ಪ್ರಾಂಶುಪಾಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.