ADVERTISEMENT

ಬೆಳಗಾವಿ: ಪೆಟ್ರೋಲ್‌ ಬಂಕ್‌ ಕಾರ್ಮಿಕರ ಸೇವೆಗೆ ಜೈ!

ಶ್ರೀಕಾಂತ ಕಲ್ಲಮ್ಮನವರ
Published 7 ಏಪ್ರಿಲ್ 2020, 3:57 IST
Last Updated 7 ಏಪ್ರಿಲ್ 2020, 3:57 IST
ಬೆಳಗಾವಿ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ
ಬೆಳಗಾವಿ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ   

ಬೆಳಗಾವಿ: ‘ಸರ್‌, ಇದೇ ಟೈಮ್‌ ಅಲ್ವಾ ಕೆಲ್ಸ ಮಾಡೋಕೆ. ನಮ್ಮ ಮಾಲೀಕರ ನಂಬಿಕೆ ಉಳಿಸಿಕೊಳ್ಳೋಕೆ. ಜನರಿಗೆ ಸೇವೆ ಮಾಡೋಕೆ...’ ಎನ್ನುತ್ತಾ ರಾಜಶೇಖರ ಬಡಿಗೇರ ಪೆಟ್ರೋಲ್‌ ಟ್ಯಾಂಕ್‌ ತುಂಬಿಸಿದ. ಆತನ ಮುಖದಲ್ಲಿ ಕೊರೊನಾ ಭೀತಿ ಎಳ್ಳಷ್ಟೂ ಕಾಣಲಿಲ್ಲ, ಬದಲಾಗಿ ಸೇವೆಗೈದ ಸಂತೃಪ್ತಿ ಕಾಣಿಸಿತು.

ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ದೇಶದಲ್ಲಿ 15 ದಿನಗಳಿಂದ ಲಾಕ್‌ಡೌನ್‌ ಮಾಡಲಾಗಿದೆ. ಮನೆಯಿಂದ ಹೊರಬಂದರೆ ಸೋಂಕು ತಗಲುತ್ತದೆ ಎನ್ನುವ ಆತಂಕ ಎಲ್ಲೆಡೆ ಮೂಡಿದೆ. ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದ ಖಾಸಗಿ ವೈದ್ಯರು ಕ್ಲಿನಿಕ್‌ ಬಂದ್‌ ಮಾಡಿ ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದರೆ, ಕೇವಲ ₹ 12,000 ಸಂಬಳ ಪಡೆಯುತ್ತಿದ್ದ ರಾಜಶೇಖರ, ದಿನದ ಎಂಟು ತಾಸು ನಿಂತುಕೊಂಡು ವಾಹನಗಳಿಗೆ ಪೆಟ್ರೋಲ್‌ ತುಂಬಿಸುತ್ತಿದ್ದರು.

‘ನಿಮಗೆ ಕೊರೊನಾ ಭಯ ಇಲ್ವೇನ್ರಿ?’ ಎಂದು ಪ್ರಶ್ನಿಸಿದ್ದಕ್ಕೆ, ‘ಕಂಪನಿಯವರು ಸ್ಯಾನಿಟೈಸರ್‌ ಕೊಟ್ಟಿದ್ದಾರೆ. ಅರ್ಧ ಗಂಟೆಗೊಂದು ಸರಿ ಕೈ ತೊಳೆದುಕೊಳ್ಳುತ್ತೇವೆ. ಮಾಸ್ಕ್‌ ಹಾಕಿಕೊಳ್ಳುತ್ತೇವೆ. ಗ್ರಾಹಕರಿಂದ ಒಂದೆರಡು ಅಡಿ ಅಂತರ ಕಾಯ್ದುಕೊಳ್ಳುತ್ತೇವೆ’ ಎಂದು ವಿಶ್ವಾಸದಿಂದ ಉತ್ತರಿಸಿದರು.

ADVERTISEMENT

ಮೂಲತಃ ಗೋಕಾಕದವರಾದ ಅವರು, ಸದಾಶಿವ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ಹೆಂಡ್ತಿ, 3 ವರ್ಷದ ಮಗಳ ಜೊತೆ ವಾಸವಾಗಿದ್ದಾರೆ. ಪ್ರತಿದಿನ 8 ತಾಸು ಶಿಫ್ಟ್‌ ಮೇಲೆ ಕೆಲಸ ಮಾಡುತ್ತಿದ್ದಾರೆ. ರಜೆ ಬೇಕಾದರೆ ತೆಗೆದುಕೊಳ್ಳಬಹುದು ಎಂದು ಕಂಪನಿಯ ಮಾಲೀಕರು ಹೇಳಿದ್ದರೂ, ಮನೆಯಲ್ಲಿರದೇ ಬಂಕ್‌ಗೆ ಬಂದು ಎಂದಿನಂತೆ ಪೆಟ್ರೋಲ್‌ ತುಂಬಿಸುತ್ತಿದ್ದಾರೆ.

‘ಈಗ ಸಾರಿಗೆ ಬಸ್‌ಗಳಿಲ್ಲ. ಆಟೊಗಳಿಲ್ಲ. ಸಾರ್ವಜನಿಕ ವಾಹನ ವ್ಯವಸ್ಥೆಗಳಿಲ್ಲ. ಹೀಗಾಗಿ ಜನರು ಬೈಕ್‌, ಕಾರುಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಆಸ್ಪತ್ರೆಗಾಗಲಿ, ಹಾಲು, ದಿನಸಿ ತರಲಾಗಲಿ ಸ್ವಂತ ವಾಹನಗಳಲ್ಲಿಯೇ ಹೋಗಬೇಕಾದ ಅನಿವಾರ್ಯತೆ ಇದೆ. ಈ ವಾಹನಗಳಿಗೆ ಪೆಟ್ರೋಲ್‌– ಡೀಸೆಲ್‌ ಬೇಕೇಬೇಕಲ್ಲವೇ?’ ಎಂದು ಹೇಳಿದರು.

‘ಸಾರ್ವಜನಿಕರ ವಾಹನಗಳ ಜೊತೆ ಪೊಲೀಸರ ವಾಹನಗಳು, ಅಂಬುಲೆನ್ಸ್‌, ವೈದ್ಯರು, ಸಿಬ್ಬಂದಿಗಳ ವಾಹನಗಳು, ಹಾಲು, ತರಕಾರಿ, ದಿನಸಿ ಸಾಗಿಸುವ ವಾಹನಗಳು ಸೇರಿದಂತೆ ಇತರ ಎಲ್ಲ ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳಿಗೂ ತೈಲದ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿ ನಾವು ದಿನದ 24 ತಾಸೂ ಕೆಲಸ ನಿರ್ವಹಿಸುತ್ತಿದ್ದೇವೆ’ ಎಂದು ಬದ್ಧತೆ ಪ್ರದರ್ಶಿಸಿದರು.

ಇಂತಹ ವಿಷಮ ಸಂದರ್ಭಗಳಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ನಿಮಗೆ ಕಂಪನಿಯವರು ವಿಶೇಷ ಭತ್ಯೆ ಏನಾದರೂ ಕೊಡುತ್ತಾರೆಯೇ ಎಂದು ಕೇಳಿದರೆ, ‘ಇಲ್ಲ, ಆ ಬಗ್ಗೆ ಕಂಪನಿಯವರೂ ಏನೂ ಹೇಳಿಲ್ಲ. ಕೊಟ್ಟರೆ ಖುಷಿಯಾಗುತ್ತದೆ’ ಎಂದು ಮುಗುಳ ನಕ್ಕರು.

ಜಿಲ್ಲೆಯಲ್ಲಿ ಅಂದಾಜು 200 ಪೆಟ್ರೋಲ್‌ ಬಂಕ್‌ಗಳಿದ್ದು, ಬಹುತೇಕ ಕಾರ್ಯನಿರ್ವಹಿಸುತ್ತಿವೆ. ಒಂದೊಂದು ಬಂಕ್‌ಗಳಲ್ಲಿ 5ರಿಂದ 6 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಬಂಕ್‌ಗಳಲ್ಲಿ ಯುವತಿಯರೂ ಸೇವೆ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

ಶೇ 90ರಷ್ಟು ಕಡಿಮೆ:‘ಲಾಕ್‌ಡೌನ್‌ ಇರುವುದರಿಂದ ವಾಹನಗಳ ಸಂಚಾರ ತುಂಬಾ ಕಡಿಮೆಯಾಗಿದೆ. ಸುಮಾರು ಶೇ 90ರಷ್ಟು ತೈಲ ಮಾರಾಟ ಕುಸಿದಿದೆ. ತುರ್ತು ಸೇವೆ ನೀಡುತ್ತಿರುವ ವಾಹನಗಳಿಗೆ ತೈಲ ಪೂರೈಸಲು ನಾವು ಬಂಕ್‌ ತೆರೆದಿದ್ದೇವೆ’ ಎಂದು ಪೆಟ್ರೋಲ್‌ ಬಂಕ್‌ ಮಾಲೀಕ ರಾಜದೀಪ ಕೌಜಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.