ADVERTISEMENT

ಕಾರ್ಮಿಕರ ಕಲ್ಯಾಣಕ್ಕಾಗಿ ಇಂಧನ ತೈಲಗಳ ಸೆಸ್‌ ಹೆಚ್ಚಳ: ಸಚಿವ ಸಂತೋಷ ಲಾಡ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 13:18 IST
Last Updated 28 ಜುಲೈ 2025, 13:18 IST
<div class="paragraphs"><p><strong>ಬೆಳಗಾವಿಯಲ್ಲಿ ಸೋಮವಾರ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಸಂತೋಷ ಲಾಡ್‌ ಹಾಗೂ ಸತೀಶ ಜಾರಕಿಹೊಳಿ ಅವರು ಕಾರ್ಮಿಕರಿಗೆ ‘ಸ್ಮಾರ್ಟ್‌ಕಾರ್ಡ್‌’ ವಿತರಣೆ ಮಾಡಿದರು</strong></p></div>

ಬೆಳಗಾವಿಯಲ್ಲಿ ಸೋಮವಾರ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಸಂತೋಷ ಲಾಡ್‌ ಹಾಗೂ ಸತೀಶ ಜಾರಕಿಹೊಳಿ ಅವರು ಕಾರ್ಮಿಕರಿಗೆ ‘ಸ್ಮಾರ್ಟ್‌ಕಾರ್ಡ್‌’ ವಿತರಣೆ ಮಾಡಿದರು

   

ಬೆಳಗಾವಿ: ‘ಪೆಟ್ರೋಲ್‌, ಡೀಸೆಲ್ ಮೇಲಿನ ಸೆಸ್‌ ತುಸು ಹೆಚ್ಚಳ ಮಾಡಿ, ಅದರಿಂದ ಬರುವ ಆದಾಯವನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಲು ಉದ್ದೇಶಿಸಿದ್ದೇನೆ. ಎಲ್ಲ ಸಚಿವರು ಹಾಗೂ ಶಾಸಕರ ಬೆಂಬಲದೊಂದಿಗೆ ಇದನ್ನು ಮುಖ್ಯಮಂತ್ರಿ ಅವರಿಗೆ ಮನವರಿಗೆ ಮಾಡುತ್ತೇನೆ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ನಗರದಲ್ಲಿ ಸೋಮವಾರ ಶ್ರಮಿಕರ ತಾತ್ಕಾಲಿಕ ವಸತಿ ಸಮುಚ್ಛಯ ಉದ್ಘಾಟಿಸಿ, ಅಸಂಘಟಿತ ವಲಯದ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಿ ಮಾತನಾಡಿದ ಅವರು, ‘ಕೇವಲ ₹1 ಸೆಸ್‌ ಹೆಚ್ಚಳ ಮಾಡಿದರೂ ಸಾವಿರಾರು ಕೋಟಿ ಹಣ ಸಂಗ್ರಹವಾಗುತ್ತದೆ. ಇದರಿಂದ ತೈಲ ಬಳಸುವವರುಗೆ ಹೊರೆ ಏನೂ ಆಗುವುದಿಲ್ಲ. ಆದರೆ, ಕಾರ್ಮಿಕರ ಎಲ್ಲ ಬೇಡಿಕೆ ಈಡೇರಿಸಬಹುದು’ ಎಂದರು.

ADVERTISEMENT

‘ರಾಜ್ಯದಲ್ಲಿ ಹಿಂದೆ 27 ಅಸಂಘಟಿತ ವಲಯಗಳು ಮಾತ್ರ ಇದ್ದವು. ನಾನು ಒಟ್ಟು 91 ಅಸಂಘಟಿತ ವಲಯ ಗುರುತಿಸಿದ್ದೇನೆ. ಮನೆಯಲ್ಲಿ ಪಾತ್ರೆ ತೊಳೆಯುವವರಿಂದ ಹಿಡಿದು ಕಾರ್ಖಾನೆಗಳವರೆಗೆ ಎಲ್ಲರಿಗೂ ಹಕ್ಕುಗಳು, ಯೋಜನೆಗಳು ಸಿಗಬೇಕು ಎಂಬುದು ನನ್ನ ಉದ್ದೇಶ. ರಾಜ್ಯದಲ್ಲಿ 1.67 ಕೋಟಿ ಕಾರ್ಮಿಕರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಶೇ 83ರಷ್ಟು ಮಂದಿ ಅಸಂಘಟಿತ ವಲಯಕ್ಕೇ ಸೇರಿದ್ದಾರೆ’ ಎಂದರು.

‘ಆಹಾರ ಸರಬರಾಜು ಮಾಡುವವರಿಗೆ ‘ಗಿಗ್‌ಮಿಲ್‌’, ಚಲನಚಿತ್ರ ಕ್ಷೇತ್ರದ ಕಾರ್ಮಿಕರಿಗಾಗಿ ‘ಸಿನಿಮಿಲ್‌’, ಸಾರಿಗೆ ಹಾಗೂ ಮೆಕ್ಯಾನಿಕ್‌ ವಲಯದ ಕಾರ್ಮಿಕರಿಗಾಗಿ ‘ಟ್ರಾನ್ಸ್‌ಪೋರ್ಟ್‌ ಮಿಲ್‌’, ಮನೆಗೆಲಸದವರಿಗೆ ‘ಡೊಮೆಸ್ಟಿಕ್‌ ಮಿಲ್‌’ಗಳನ್ನು ಘೋಷಣೆ ಮಾಡಲಾಗಿದೆ. ಕಾರ್ಮಿಕರು ಇದ್ದಲ್ಲಿಗೇ ಹೋಗಿ ನೋಂದಣಿ ಮಾಡಿಸುವ ಕೆಲಸವೂ ನಡೆದಿದೆ. ದೇಶದಲ್ಲಿ ಪ್ರತಿ ವರ್ಷ 1.60 ಲಕ್ಷ ಜನ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಕಾರ್ಮಿಕರ ಸಂಖ್ಯೆಯೇ ಹೆಚ್ಚು. ಹಾಗಾಗಿ, ಎಲ್ಲರೂ ಒಂದೇ ಸೂರಿನಡಿ ನೋಂದಣಿ ಮಾಡಿಕೊಳ್ಳುವುದು ಅಗತ್ಯ. ಆಕಸ್ಮಿಕವಾಗಿ ಮೃತಪಟ್ಟರೆ ₹5 ಲಕ್ಷದವರೆಗೆ ಪರಿಹಾರ ಸಿಗಲಿದೆ’ ಎಂದೂ ಹೇಳಿದರು.

‘20ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಪ್ರತಿಯೊಂದು ಕಂಪನಿ ಕಡ್ಡಾಯವಾಗಿ ಗ್ರಾಚ್ಯುಟಿ ನೀಡಲು ಸೂಚಿಸಲಾಗಿದೆ. ರಾಜ್ಯದ 6,000 ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಎಲ್ಲ ಕಂಪನಿಗಳಿಗೂ ಇದನ್ನು ಕಡ್ಡಾಯ ಮಾಡಿದ್ದೇವೆ. ಅಲ್ಲದೇ, ಪರಿಶಿಷ್ಟ ಕಾರ್ಮಿಕರಿಗಾಗಿ ‘ಆಶಾದೀಪ’ ಯೋಜನೆ ಅನುಷ್ಠಾನ ಮಾಡಿದ್ದು, ಕೆಲಸಕ್ಕೆ ಸೇರಿದ ಎರಡು ವರ್ಷಗಳವರೆಗೆ ₹7,500 ನೆರವು ನೀಡಲಾಗುತ್ತಿದೆ’ ಎಂದೂ ತಿಳಿಸಿದರು.

‘ಕಾರ್ಮಿಕರ ಮಕ್ಕಳಿಗಾಗಿ ಮೂರು ವಸತಿ ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಇವುಗಳ ಪ್ರಗತಿ ಗಮನಿಸಿ ಮತ್ತಷ್ಟು ಶಾಲೆಗಳನ್ನು ನಿರ್ಮಿಸಲಾಗುವುದು. ಕಾರ್ಮಿಕರನ್ನು ‘ವೃತ್ತಿಪರ’ ಮಾಡಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಅದರಲ್ಲಿ ಸ್ಮಾರ್ಟ್‌ಕಾರ್ಡ್‌ ವಿತರಣೆ ಕೂಡ ಒಂದು’ ಎಂದೂ ಲಾಡ್‌ ಹೇಳಿದರು.

ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಶಾಸಕ ಆಸಿಫ್‌ ಸೇಠ್‌ ಮಾತಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.