ಅಥಣಿ ತಾಲ್ಲೂಕಿನ ಕನ್ನಾಳದ ಪಿಕೆಪಿಎಸ್‌ನಲ್ಲಿ ರೈತರಿಂದ ತೊಗರಿ ಖರೀದಿಸಲಾಗಿದೆ.
ವಿಜಯಪುರ/ ಬೆಳಗಾವಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ತೆರೆದಿರುವ ಕೇಂದ್ರಗಳಲ್ಲಿ ರೈತರಿಗೆ ನೀಡುತ್ತಿರುವ ರಸೀದಿಯಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ದರವಷ್ಟೇ ಇದೆಯೇ ಹೊರತು, ರಾಜ್ಯ ಸರ್ಕಾರ ಘೋಷಿಸಿದ್ದ ಪ್ರೋತ್ಸಾಹಧನದ ಬಗ್ಗೆ ಉಲ್ಲೇಖವಿಲ್ಲ.
ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹7,550 ದರ ನಿಗದಿಪಡಿಸಿದೆ. ಮುಕ್ತ ಮಾರುಕಟ್ಟೆಯಲ್ಲೇ ಇದಕ್ಕಿಂತ ಹೆಚ್ಚಿನ ದರವಿದ್ದ ಕಾರಣ ರೈತರು ಖರೀದಿ ಕೇಂದ್ರಗಳತ್ತ ಸುಳಿದಿರಲಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹450 ಪ್ರೋತ್ಸಾಹಧನ ಘೋಷಿಸಿತು. ಇದಾದ ನಂತರ ಕ್ವಿಂಟಲ್‌ಗೆ ₹8 ಸಾವಿರ ಸಿಗುತ್ತದೆ ಎಂಬ ಆಸೆಯಿಂದ ರೈತರು ಉತ್ಸಾಹದಿಂದ ನೋಂದಣಿ ಮಾಡಿಸುತ್ತಿದ್ದಾರೆ. ಏಪ್ರಿಲ್ 2ರ ವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ.
ಈವರೆಗೆ ನೋಂದಣಿ ಮಾಡಿಕೊಂಡವರ ಪೈಕಿ ವಿಜಯಪುರ ಜಿಲ್ಲೆಯಲ್ಲಿ 10,070 ರೈತರು 1,59,685 ಕ್ವಿಂಟಲ್ ಮತ್ತು ಬೆಳಗಾವಿಯಲ್ಲಿ 964 ರೈತರು 12,953 ಕ್ವಿಂಟಲ್ ತೊಗರಿ ಮಾರಾಟ ಮಾಡಿದ್ದಾರೆ. ಆದರೆ, ತೊಗರಿ ಖರೀದಿ ಬಳಿಕ ನೀಡುವ ರಸೀದಿಯಲ್ಲಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಮೊತ್ತವಾದ ₹450 ದಾಖಲಾಗುತ್ತಿಲ್ಲ.
ವಿಜಯಪುರ ಜಿಲ್ಲೆಯ 5.34 ಲಕ್ಷ ಹೆಕ್ಟೇರ್ ಮತ್ತು ಬೆಳಗಾವಿ ಜಿಲ್ಲೆಯ 11,500 ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ವಿಜಯಪುರದಲ್ಲಿ 99 ಮತ್ತು ಬೆಳಗಾವಿಯಲ್ಲಿ 6 ಕೇಂದ್ರಗಳಿವೆ.
ಸಿಗುತ್ತದೆಯೋ ಇಲ್ಲವೋ?: ‘ನಾನು 22 ಕ್ವಿಂಟಲ್ ತೊಗರಿ ಬೆಳೆದಿದ್ದೇನೆ. ಕ್ವಿಂಟಲ್‌ಗೆ ₹8 ಸಾವಿರ ಸಿಗುವ ನಿರೀಕ್ಷೆಯಲ್ಲಿ ನಮ್ಮೂರಿನ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದೇನೆ. ಆದರೆ, ಖರೀದಿ ರಸೀದಿಯಲ್ಲಿ ಕೇಂದ್ರ ನಿಗದಿಪಡಿಸಿದ ₹7,550 ದರವಷ್ಟೇ ಇದೆ. ರಾಜ್ಯ ಸರ್ಕಾರದ ಪ್ರೋತ್ಸಾಹಧನವನ್ನು ನಮೂದಿಸಿಲ್ಲ. ಪ್ರೋತ್ಸಾಹ ಧನ ಸಿಗುವುದೋ ಅಥವಾ ಇಲ್ಲವೋ ಎಂಬುದು ತಿಳಿಯದಾಗಿದೆ’ ಎಂದು ಅಥಣಿ ತಾಲ್ಲೂಕಿನ ಕನ್ನಾಳದ ರೈತ ಬಸವಲಿಂಗ ಹಿರೇಮಠ ತಿಳಿಸಿದರು.
ಅಥಣಿ ತಾಲ್ಲೂಕಿನ ಕನ್ನಾಳ ಪಿಕೆಪಿಎಸ್‌ನ ಕೇಂದ್ರದಲ್ಲಿ ರೈತರಿಂದ ತೊಗರಿ ಖರೀದಿಸಿದ ನಂತರ ನೀಡಿದ ರಸೀದಿಯಲ್ಲಿ ಕೇಂದ್ರ ನಿಗದಿಪಡಿಸಿದ ದರವನ್ನಷ್ಟೇ ಬರೆದಿರುವುದು
ಅಲ್ಲದೆ, ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಲು ನೋಂದಣಿಗೆ ನಿಗದಿಪಡಿಸಿದ್ದ ಅವಧಿಯು ಸೋಮವಾರಕ್ಕೆ (ಮಾರ್ಚ್ 17) ಮುಕ್ತಾಯವಾಗಲಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಹಲವು ರೈತರಿಗೆ ಇನ್ನೂ ನೋಂದಣಿ ಮಾಡಿಸಲು ಆಗಿಲ್ಲ. ಒಂದೇ ಸರ್ವೆ ನಂಬರ್‌ನಲ್ಲಿ ಒಂದಕ್ಕಿಂತ ಹೆಚ್ಚು ರೈತರಿದ್ದರೆ ಎಲ್ಲರಿಗೂ ನೋಂದಣಿ ಮಾಡಲಾಗಿಲ್ಲ. ಹಾಗಾಗಿ, ನೋಂದಣಿ ದಿನಾಂಕವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಬೇಕು ಎಂಬುದು ರೈತರ ಒತ್ತಾಯ.
‘ತೊಗರಿ ಮಾರಾಟಕ್ಕೆ ಬಂದ ರೈತರು ರಸೀದಿಯಲ್ಲಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಮೊತ್ತ ದಾಖಲಿಸದಿರುವ ಬಗ್ಗೆ ತಕರಾರು ತೆಗೆಯುತ್ತಿದ್ದಾರೆ. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಥಣಿ ಶಾಖೆಯ ವ್ಯವಸ್ಥಾಪಕ ಹನುಮಂತ ಗಳವೆ ತಿಳಿಸಿದರು.
ಅಥಣಿ ತಾಲ್ಲೂಕಿನ ಕನ್ನಾಳದ ಪಿಕೆಪಿಎಸ್‌ನಲ್ಲಿ ರೈತರಿಂದ ತೊಗರಿ ಖರೀದಿಸಲಾಗಿದೆ
ನೋಂದಣಿಗೆ ದಿನಾಂಕ ವಿಸ್ತರಣೆ ರಸೀದಿಯಲ್ಲಿ ಪ್ರೋತ್ಸಾಹಧನ ಮೊತ್ತ ದಾಖಲಿಸಬೇಕು ಎಂಬ ರೈತರ ಮನವಿ ಸರ್ಕಾರದ ಗಮನಕ್ಕೆ ತರಲಾಗುವುದು. ರೈತರು ಆತಂಕಪಡಬೇಕಿಲ್ಲಮಹಾದೇವಪ್ಪ ಚಬನೂರ ಉಪ ನಿರ್ದೇಶಕ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬೆಳಗಾವಿ
ರಸೀದಿಯಲ್ಲಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಉಲ್ಲೇಖವಾಗದ ಬಗ್ಗೆ ರೈತರು ಆತಂಕ ಪಡಬೇಕಿಲ್ಲ. ಬಿಲ್ ತಯಾರಾಗುವಾಗ ನಮೂದಾಗಿಲ್ಲ. ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗಿದೆಶಿವಾನಂದ ಗೋಟೆ ಉಪ ನಿರ್ದೇಶಕ ಎಪಿಎಂಸಿ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.