ADVERTISEMENT

ಹೃದಯವನ್ನು ಅರಳಿಸುವ ಗುಣ ಕಾವ್ಯಕ್ಕಿದೆ: ಮಲ್ಲಿಕಾರ್ಜುನ ಛಬ್ಬಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 2:32 IST
Last Updated 18 ನವೆಂಬರ್ 2025, 2:32 IST
ಮುನವಳ್ಳಿಯ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯದ ಆವರಣದಲ್ಲಿಭಾನುವಾರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಗಣ್ಯರು ಪಾಲ್ಗೊಂಡರು
ಮುನವಳ್ಳಿಯ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯದ ಆವರಣದಲ್ಲಿಭಾನುವಾರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಗಣ್ಯರು ಪಾಲ್ಗೊಂಡರು   

ಮುನವಳ್ಳಿ: ಎಲ್ಲ ನೋವುಗಳನ್ನು ಮರೆಸಿ ಹೃದಯವನ್ನು ಅರಳಿಸುವ ಚಿಕಿತ್ಸಕ ಗುಣ ಕವಿತೆಗಿದೆ. ಪ್ರಸ್ತುತ ವಸ್ತು ಸ್ಥಿತಿಗೆ ಕಾವ್ಯ ಸ್ಪಂದಿಸುವುದಲ್ಲದೆ ಜನರ ನೋವಿಗೆ ಮದ್ದಾಗಬೇಕು ಎಂದು ಬೈಲಹೊಂಗಲದ ಕವಿ ಮಲ್ಲಿಕಾರ್ಜುನ ಛಬ್ಬಿ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಬರಹಗಾರನ ಬರವಣಿಗೆ ಕಾವ್ಯದಿಂದಲೇ ಆರಂಭವಾಗುತ್ತದೆ. ಅನುಭವಗಳ ಅನಾವರಣವೇ ಕಾವ್ಯ. ಕವಿಯಾದವನು ಯಾವುದೇ ಪ್ರಶಸ್ತಿಯ ಗೀಳಿಗೆ ಸಿಲುಕದೇ ಸೃಜನಶೀಲ ಬರವಣಿಗೆಯ ಕಡೆ ಗಮನ ನೀಡಬೇಕು. ಈಚೆಗೆ ಕೃತಿಚೌರ್ಯದಂತ ಕೃತ್ಯಗಳು ಹೆಚ್ಚುತ್ತಿವೆ. ಕದ್ದು ಬರೆದು ಹೆಸರು ಗಳಿಸುವ ಹಪಹಪಿ ಬೇಡ’ ಎಂದು ಅವರು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕವಿ ಮಹಾಂತಪ್ಪ ನಂದೂರ ಮಾತನಾಡಿ, ‘ಕಾವ್ಯದ ಎತ್ತರಕ್ಕೆ ಹೋಗುವ ಪ್ರಯತ್ನವನ್ನು ಕವಿಗಳು ಮಾಡಬೇಕಿದೆ. ಬರೆದಂತೆ ಬದುಕುವುದು ಮುಖ್ಯ’ ಎಂದು ಹೇಳಿದರು. 

ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಾ ಕದಂ ಮಾತನಾಡಿದರು.

ಕಾವ್ಯಸ್ಪರ್ಧೆಯಲ್ಲಿ ದಾವಣಗೆರೆಯ ಮನು ಗುರುಸ್ವಾಮಿ ಪ್ರಥಮ, ರಾಣೆಬೆನ್ನೂರಿನ ಎಸ್.ಡಿ.ದೊಡ್ಡಚಿಕ್ಕಣ್ಣ ನವರ ದ್ವಿತೀಯ, ಉತ್ತರ ಕನ್ನಡ ಜಿಲ್ಲೆಯ ಪೂನಂ ಧಾರವಾಡಕರ ತೃತೀಯ ಸ್ಥಾನ ಪಡೆದರು. ಇವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 28 ಕವಿಗಳು ಕಾವ್ಯ ವಾಚನ ಮಾಡಿದರು. ಪ್ರತಿಷ್ಠಾನದ ಕಾರ್ಯ ಚಟುವಟಿಕೆ ಬಗ್ಗೆ ಅಧ್ಯಕ್ಷ ನಾಗೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾನ್ವಿ ತುರಮಂದಿ ಭರತನಾಟ್ಯ ಪ್ರದರ್ಶಿಸಿದರು. ಕಾರ್ಯಪಾಲಕ ಎಂಜಿನಿಯರ್‌ ವಿಠ್ಠಲ ತಡಸಲೂರ, ಎಸ್.ಜಿ. ತುರಮಂದಿ, ಎ.ಎಸ್.ಮಕಾನದಾರ, ಪತ್ರಕರ್ತ ಟಿ.ಎನ್. ಮುರಂಕರ, ಹಾಶೀಮ್ ತಹಶೀಲದಾರ, ವಿಠ್ಠಲ ಕಂಬಾರ, ಮಲ್ಲಿಕಾರ್ಜುನ ಬೀಳಗಿ, ಬಿ.ಪಿ.ಪಟ್ಟಣಶೆಟ್ಟಿ, ಎಸ್.ಬಿ. ಮದ್ದಾನಿ, ಎಸ್.ಬಿ ಗರಗದ, ಬಿ.ವಿ.ಪತ್ತಾರ, ರಮೇಶ ತಳವಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.