ADVERTISEMENT

ಬೆಳಗಾವಿ: ಹಲವು ಅಪರಾಧ ಪ್ರಕರಣಗಳ ‘ಸುಳಿವು’ ನೀಡಿದ್ದ ರ‍್ಯಾಂಬೋ ನಿಧನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 8:20 IST
Last Updated 12 ಜೂನ್ 2021, 8:20 IST
ರ‍್ಯಾಂಬೋ ಶ್ವಾನ
ರ‍್ಯಾಂಬೋ ಶ್ವಾನ   

ಬೆಳಗಾವಿ: ಹಲವು ಅಪರಾಧ ಪ್ರಕರಣಗಳಲ್ಲಿ ಮಹತ್ವದ ಸುಳಿವು ನೀಡಿದ್ದ ಹಾಗೂ ತನಿಖಾಧಿಕಾರಿಗೆ ಉತ್ತಮ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದ ಇಲ್ಲಿನ ಪೊಲೀಸ್ ಶ್ವಾನ ‘ರ‍್ಯಾಂಬೋ’ ಶನಿವಾರ ಮೃತಪಟ್ಟಿತು. ನಗರ ಪೊಲೀಸ್ ಕಮಿಷನರೇಟ್‌ನ ಅಧಿಕಾರಿಗಳ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

‘ಜರ್ಮನ್ ಶೆಪರ್ಡ್‌ ತಳಿಯ ಈ ಶ್ವಾನ 2009ರ ಅ. 2ರಂದು ಜನಿಸಿತ್ತು. ಈ ತಳಿಯ ಶ್ವಾನಗಳ ಜೀವಿತಾವಧಿ 11 ವರ್ಷ 9 ತಿಂಗಳಾಗಿದೆ. 2010ರ ಮೇ 25ರಿಂದ 2011ರ ಏ. 4ರವರೆಗೆ ಬೆಂಗಳೂರಿನ ಆಡುಗೋಡಿಯ ಸಿಎಆರ್‌ (ದಕ್ಷಿಣ) ರಾಜ್ಯ ಪೊಲೀಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ರ‍್ಯಾಂಬೊಗೆ ತರಬೇತಿ ನೀಡಲಾಗಿತ್ತು. ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಅದು ಉತ್ತಮವಾಗಿ ಕಾರ್ಯನಿರ್ವಹಿಸಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

‘2016–17 ಹಾಗೂ 2017–18ನೇ ಸಾಲಿನಲ್ಲಿ ನಡೆದ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಅಪರಾಧ ವಿಭಾಗದಲ್ಲಿ ಪಾಲ್ಗೊಂಡು ಸತತ 2ನೇ ಸ್ಥಾನ ಗಳಿಸಿತ್ತು. ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಎಪಿಎಂಸಿ, ಟಿಳಕವಾಡಿ, ಮಾಳಮಾರುತಿ, ಕ್ಯಾಂಪ್, ಮಾರಿಹಾಳ, ಉದ್ಯಮಬಾಗ, ಕಾಕತಿ ಮೊದಲಾದ ಠಾಣೆಗಳ ವ್ಯಾಪ್ತಿಯಲ್ಲಿನ ಹಲವು ಅಪರಾಧ ಪ್ರಕರಣಗಳಲ್ಲಿ ಮಹತ್ವದ ಸುಳಿವು ಕೊಟ್ಟಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.