ADVERTISEMENT

ಬೆಳಗಾವಿ: ಉಮೇಶ ಕತ್ತಿ ನಿವಾಸಕ್ಕೆ ಗಣ್ಯರ ದಂಡು, ಕುಟುಂಬಸ್ಥರಿಗೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 10:42 IST
Last Updated 8 ಸೆಪ್ಟೆಂಬರ್ 2022, 10:42 IST
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬೆಲ್ಲದ ಬಾಗೇವಾಡಿಯಲ್ಲಿ ಗುರುವಾರ ಶೀಲಾ ಕತ್ತಿ, ರಮೇಶ ಕತ್ತಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬೆಲ್ಲದ ಬಾಗೇವಾಡಿಯಲ್ಲಿ ಗುರುವಾರ ಶೀಲಾ ಕತ್ತಿ, ರಮೇಶ ಕತ್ತಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು   

ಬೆಲ್ಲದ ಬಾಗೇವಾಡಿ (ಬೆಳಗಾವಿ ಜಿಲ್ಲೆ): ಉಮೇಶ ಕತ್ತಿ ಅವರ ಇಲ್ಲಿನ ನಿವಾಸಕ್ಕೆ ಗುರುವಾರ ಕೂಡ ಹಲವು ಗಣ್ಯರು, ಸಚಿವರು, ಶಾಸಕರು, ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿದರು. ತೋಟದ ಆವರಣದಲ್ಲಿನ ಉಮೇಶ ಕತ್ತಿ ಅವರ ಸಮಾಧಿಗೂ ಭೇಟಿ ನೀಡಿ ನಮನ ಸಲ್ಲಿಸಿದರು.

ಉಮೇಶ ಕತ್ತಿಯವರ ಪತ್ನಿ ಶೀಲಾ, ಪುತ್ರ ನಿಖಿಲ್, ಪುತ್ರಿ ಸ್ನೇಹಾ, ಸಹೋದರ ರಮೇಶ, ಅವರ ಪುತ್ರರಾದ ಪವನ್, ಪೃಥ್ವಿ ಸೇರಿ ಕುಟುಂಬದವರನ್ನು ಭೇಟಿ ಮಾಡಿದ ಗಣ್ಯರು ಸಾಂತ್ವನ ಹೇಳಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಬೆಲ್ಲದ ಬಾಗೇವಾಡಿಗೆ ತೆರಳಿದರು.

ADVERTISEMENT

'ಉಮೇಶ ಕತ್ತಿ ಬಿಂದಾಸ್ ವ್ಯಕ್ತಿತ್ವದವರು. ಅವರ ಅಗಲಿಕೆಯಿಂದ ಬಿಜೆಪಿ ಮತ್ತು ರಾಜ್ಯಕ್ಕೆ ಅಪಾರವಾದ ಹಾನಿಯಾಗಿದೆ' ಎಂದು ಮಾಧ್ಯಮದವರಿಗೆ ತಿಳಿಸಿದರು.

ಸಚಿವ ಎಂಟಿಬಿ ನಾಗರಾಜ್, 'ಊಮೇಶ ಅವರು ತಾರುಣ್ಯದಲ್ಲೇ ಪಳಗಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಬಹಳಷ್ಟು ಕನಸು ಕಂಡಿದ್ದರು. ನೇರ ನುಡಿಗಾಗಿಯೇ ಅವರು ಆಪ್ತರಾಗುತ್ತಿದ್ದರು' ಎಂದರು.

'ಇದು ಇಡೀ ಉತ್ತರ ಕರ್ನಾಟಕಕ್ಕೆ ಅತ್ಯಂತ ನೋವಿನ ಸಂಗತಿ. ನಮಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಸಚಿವ ಮುನಿರತ್ನ ತೀವ್ರ ದುಃಖಿಸಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, 'ಹಿಡಕಲ್ ಜಲಾಶಯದಲ್ಲಿ ಕೂಡ ಕೆ.ಆರ್.ಎಸ್. ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಉಮೇಶ ಕತ್ತಿ ಅವರ ಆಸೆಯನ್ನು ಸಿ.ಎಂ. ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು ಈಡೇರಿಸಲಾಗುವುದು' ಎಂದರು.

ಶ್ರೀಶೈಲ ಪೀಠದ ಚನ್ನಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೊಲ್ಹಾಪುರ ಕಣೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದಗ ಡಂಬಳ ಶಿವಾನಂದ ಸ್ವಾಮೀಜಿ ಸೇರಿದಂತೆ ಹಲವರು ಕತ್ತಿ ಕುಟುಂಬದವರಿಗೆ ಧೈರ್ಯ ಹೇಳಿದರು.

ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಸಿದ್ದು ಸವದಿ, ಲಕ್ಷ್ಮೀ ಹೆಬ್ಬಾಳಕರ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವರು ಭೇಟಿ ನೀಡಿದರು.

ಇವನ್ನೂ ಓದಿ...

ಶ್ರೀಶೈಲ ಪೀಠದ ಚನ್ನಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೆಲ್ಲದ ಬಾಗೇವಾಡಿಯಲ್ಲಿ ಗುರುವಾರ ರಮೇಶ ಕತ್ತಿ ಹಾಗೂ ಕುಟುಂಬದವರಿಗೆ ಧೈರ್ಯ ಹೇಳಿದರು
ಕೊಲ್ಹಾಪುರ ಕಣೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಭೇಟಿ
ಬೆಲ್ಲದ ಬಾಗೇವಾಡಿಗೆ ಭೇಟಿ ನೀಡಿದ ಅರುಣ್ ಸಿಂಗ್, ಭೈರತಿ ಬಸವರಾಜ್, ಡಾ.ಸುಧಾಕರ, ಎಂಟಿಬಿ ನಾಗರಾಜ್ ರಮೇಶ ಕತ್ತಿ ಅವರಿಂದ ಮಾಹಿತಿ ಪಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.