ADVERTISEMENT

ಹೊಸ ಗಣಿ ನೀತಿಗೆ ಸಿದ್ಧತೆ: ಸಚಿವ ಮುರುಗೇಶ ನಿರಾಣಿ

ಬೆಳಗಾವಿಯಲ್ಲಿ ‘ಖನಿಜ ಭವನ’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 14:49 IST
Last Updated 14 ಮಾರ್ಚ್ 2021, 14:49 IST
ಮುರುಗೇಶ್‌ ನಿರಾಣಿ
ಮುರುಗೇಶ್‌ ನಿರಾಣಿ   

ಬೆಳಗಾವಿ: ‘ಹೊಸ ಗಣಿ ನೀತಿಯ ಮೂಲಕ ರಾಜ್ಯವನ್ನು ಉದ್ಯಮಸ್ನೇಹಿಯನ್ನಾಗಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಉಳಿದ ರಾಜ್ಯಗಳಿಗೆ ಮಾದರಿಯಾಗುವಂತೆ ನೀತಿ ತರಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇಲ್ಲಿನ ಕುಮಾರಸ್ವಾಮಿ ಬಡಾವಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೂತನ ಕಟ್ಟಡ ‘ಖನಿಜ ಭವನ’ವನ್ನು ಭಾನುವಾರ ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಖನಿಜ ಸಂಪನ್ಮೂಲದ ವಿಷಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇಲ್ಲಿ ಬೇರೆ ರಾಜ್ಯಗಳಿಗಿಂತ ಹೆಚ್ಚು ಖನಿಜ ಸಂಪನ್ಮೂಲಗಳಿವೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸ ನೀತಿ ರೂಪಿಸುತ್ತಿದ್ದು, ಕರಡು ಪ್ರತಿ ಸಿದ್ಧವಾಗುತ್ತಿದೆ. ನೀತಿ ಜಾರಿ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಮರಳು ಸಿಗುವಂತೆ ಮಾಡಲಾಗುವುದು. ಇದಕ್ಕಾಗಿ ಹಿರಿಯ ಅದಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಮುಖ್ಯಮಂತ್ರಿ ಸಹ ಬಜೆಟ್‌ದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ₹ 10 ಲಕ್ಷ ವೆಚ್ಚದಲ್ಲಿ ಒಳ್ಳೆಯ ಮನೆ ನಿರ್ಮಿಸಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ’ ಎಂದು ಹೇಳಿದರು.

ADVERTISEMENT

ತೆರಿಗೆ ನಿಗದಿಗೆ

‘₹ 10 ಲಕ್ಷಕ್ಕಿಂತ ಹೆಚ್ಚು ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವವರಿಗೆ, ಕಟ್ಟಡ ನಿರ್ಮಾಣ ಪರವಾನಗಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಎಷ್ಟು ಮರಳು ಉಪಯೋಗ ಆಗುತ್ತದೆ ಎನ್ನುವುದನ್ನು ನೋಡಿಕೊಂಡು ಸರ್ಕಾರವು ತೆರಿಗೆ ನಿಗದಿಪಡಿಸುತ್ತದೆ. ಅದೇ ರೀತಿ ಸರ್ಕಾರಿ ಟೆಂಡರ್ ಮೂಲಕ ನಡೆಯುವ ಕಾಮಗಾರಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮರಳು ಉಪಯೋಗ ಆಗುತ್ತದೆ ಎನ್ನುವುದನ್ನು ಆಧರಿಸಿ ಗುತ್ತಿಗೆದಾರರಿಗೆ ತೆರಿಗೆ ನಿಗದಿಪಡಿಸಲಾಗುತ್ತಿದೆ. ಇದರಂತೆ ಮಹಾನಗರ ಪಾಲಿಕೆ, ಗ್ರಾಮ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹಿಸುತ್ತವೆ’ ಎಂದರು.

‘ಗಣಿ ಉದ್ಯಮ ನಡೆಸುವವರಿಗೆ ಯಾವುದೇ ತೊಂದರೆ ಆಗದಂತೆ ಕಾನೂನು ರೂಪಿಸಲಾಗುತ್ತಿದೆ. ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದೆ. ಮೈಸೂರು, ಕಲಬುರ್ಗಿ, ಬೆಳಗಾವಿ, ಬೆಂಗಳೂರು, ಮಂಗಳೂರಿನಲ್ಲಿ ಗಣಿ ಅದಾಲತ್ ನಡೆಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.