ADVERTISEMENT

ಕುರ್‌ಆನ್‌ ಸುಟ್ಟ ಪ್ರಕರಣ: ಬೆಳಗಾವಿ ಡಿಸಿ ಕಚೇರಿ ಎದುರು ಮುಸ್ಲಿಮರ ಪ್ರತಿಭಟನೆ

ಬಕ್ರೀದ್‌ನೊಳಗೆ ಆರೋಪಿಗಳನ್ನು ಬಂಧಿಸಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 11:34 IST
Last Updated 2 ಜೂನ್ 2025, 11:34 IST
<div class="paragraphs"><p>ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಮುಹಫಿಝ್‌–ಇ–ಕುರ್‌ಆನ್‌ ಯೂಥ್‌ ಕಮಿಟಿ ನೇತೃತ್ವದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು   </p></div>

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಮುಹಫಿಝ್‌–ಇ–ಕುರ್‌ಆನ್‌ ಯೂಥ್‌ ಕಮಿಟಿ ನೇತೃತ್ವದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು

   

ಪ್ರಜಾವಾಣಿ ಚಿತ್ರ

ಬೆಳಗಾವಿ: ‘ತಾಲ್ಲೂಕಿನ ಸಂತಿ ಬಸ್ತವಾಡದ ಮಸೀದಿಯಲ್ಲಿದ್ದ ಕುರ್‌ಆನ್‌ ಮತ್ತು ಹದೀಸ್‌ಗಳನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿ, ಬಕ್ರೀದ್‌ನೊಳಗೆ ಆರೋಪಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ, ಮುಹಫಿಝ್‌–ಇ–ಕುರ್‌ಆನ್‌ ಯೂಥ್‌ ಕಮಿಟಿ ನೇತೃತ್ವದಲ್ಲಿ ಮುಸ್ಲಿಮರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ADVERTISEMENT

‘ಈ ಪ್ರಕರಣದಲ್ಲಿ ಪೊಲೀಸರು ತನಿಖೆ ವಿಳಂಬ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಘಟನೆ ನಡೆದು 20 ದಿನಗಳಾದರೂ ಆರೋಪಿಗಳ ಬಂಧನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಮಧ್ಯೆ ಸಂತಿ ಬಸ್ತವಾಡದಲ್ಲಿನ ಹಿಂದೂ ಮುಖಂಡರು ಗ್ರಾಮಸ್ಥರಿಗೆ ತಪ್ಪು ಸಂದೇಶ ನೀಡಿ, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಅವರೊಂದಿಗೆ ಯಾವುದೇ ವ್ಯವಹಾರ ಮಾಡಬಾರದು ಎಂದು ತಿಳಿಸಿ, ಕೋಮು ಸಾಮರಸ್ಯ ಕದಡುತ್ತಿದ್ದಾರೆ. ಊರಲ್ಲಿ ಅಶಾಂತಿ ಉಂಟುಮಾಡುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಕುರ್‌ಆನ್‌ ಮಾತ್ರವಲ್ಲ; ಭಗವದ್ಗೀತೆ ಮತ್ತು ಬೈಬಲ್‌ಗೆ ಯಾರಾದರೂ ಹಾನಿ ಮಾಡಿದರೂ ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಜರುಗಿಸುವ ಕೆಲಸವಾಗಬೇಕು. ಹೀಗಿರುವಾಗ ಈ ಪ್ರಕರಣದಲ್ಲಿ ತಡಮಾಡದೆ ಆರೋಪಿಗಳನ್ನು ಬಂಧಿಸಬೇಕು. ತನಿಖೆ ವಿಳಂಬವಾದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ’ ಎಂದು ಎಚ್ಚರಿಕೆ ಕೊಟ್ಟರು.

‘ಸಂತಿ ಬಸ್ತವಾಡದಲ್ಲಿ ಮುಸ್ಲಿಮರ ಭಾವನೆಗೆ ಧಕ್ಕೆ ತರುವಂಥ ಘಟನೆ ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿಲ್ಲ’ ಎಂದು ದೂರಿದರು.

ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.