ಬೆಳಗಾವಿ/ ಹೊಸಪೇಟೆ(ವಿಜಯನಗರ): ಸತತ ಮಳೆ ಕಾರಣ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣ ಭಾನುವಾರ 2.77 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ಜಿಲ್ಲೆಯ ಸಪ್ತ ನದಿಗಳೂ ಉಕ್ಕಿ ಹರಿಯುತ್ತಿದ್ದು, ಪ್ರವಾಹಪೀಡಿತ ಗ್ರಾಮಗಳ ಪಟ್ಟಿ ಬೆಳೆಯುತ್ತಲೇ ಇದೆ.
ತುಂಗಭದ್ರಾ ಜಲಾಶಯ ತುಂಬಿ ತುಳುಕುತ್ತಿದ್ದು, ಎಲ್ಲಾ 33 ಕ್ರಸ್ಟ್‌ಗೇಟ್‌ಗಳಿಂದ ನೀರು ನದಿಗೆ ಧುಮ್ಮುಕ್ಕುತ್ತಿದೆ. ವೀಕ್ಷಣೆಗೆ ರಾಜ್ಯದ ನಾನಾ ಭಾಗಗಳಲ್ಲದೆ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿತೀರದ ಗ್ರಾಮಸ್ಥರನ್ನು ರಕ್ಷಿಸಿ ಸ್ಥಳಾಂತರಿಸುವ ಕಾರ್ಯಮುಂದುವರಿದಿದೆ. ಈವರೆಗೆ ಪ್ರವಾಹಪೀಡಿತ 38 ಗ್ರಾಮಗಳ 2,081 ಕುಟುಂಬಗಳನ್ನು ರಕ್ಷಣೆ ಮಾಡಿ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಚಿಕ್ಕೋಡಿ ತಾಲ್ಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿ ಜಲಾವೃತಗೊಂಡಿದ್ದು ದರ್ಶನ ಸ್ಥಗಿತಗೊಳಿಸಲಾಗಿದೆ. ಗೋಕಾಕ ತಾಲ್ಲೂಕಿನ ಅಡಿಬಟ್ಟಿ, ಹಡಗಿನಾಳ, ಮೆಳವಂಕಿ, ಉದಗಟ್ಟಿ ಮತ್ತಿತರ ಗ್ರಾಮಗಳು ಘಟಪ್ರಭಾ ನದಿ ಪ್ರವಾಹದಿಂದ ನಲುಗಿದ್ದು, ಅಲ್ಲಿನ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಮೂಡಲಗಿ ತಾಲ್ಲೂಕಿನ ಮಸಗುಪ್ಪಿ, ಹುಣಶ್ಯಾಳ ಪಿ.ವೈ., ಢವಳೇಶ್ವರ ಗ್ರಾಮಗಳು ನಡುಗಡ್ಡೆಯಾಗಿ ಪರಿಣಮಿಸಿವೆ.
ಮುಧೋಳ–ಯಾದವಾಡ ಸೇತುವೆ ಮುಳುಗಡೆ
ಮುಧೋಳ (ಬಾಗಲಕೋಟೆ) ವರದಿ: ಘಟಪ್ರಭಾ ನದಿಯ ಪ್ರವಾಹದಿಂದ ಭಾನುವಾರ ಬೆಳಿಗ್ಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಧೋಳ– ಯಾದವಾಡ ಸೇತುವೆ ಮುಳುಗಡೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ರಸ್ತೆ ಸಂಪರ್ಕ ಬಂದ್ ಆಗಿದೆ. ಹೀಗಾಗಿ ಸುಮಾರು 25 ಕಿ.ಮೀ ಅಂತರದಲ್ಲಿ ಪರ್ಯಾಯ ಮಾರ್ಗ ಬಳಸಲಾಗುತ್ತಿದೆ.
ಮುಧೋಳ ನಗರದ ಜುಂಝರಕೊಪ್ಪ ಗಲ್ಲಿಯಲ್ಲಿ ನೀರು ನುಗ್ಗಿದ್ದು, ನಗರದ ಎಂಕೆಬಿಎಸ್ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ತಾಲ್ಲೂಕಿನ ಮಿರ್ಜಿ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಸುಮಾರು 25 ಮನೆಗಳು ಮುಳುಗಡೆ ಆಗಿದ್ದು, ಮಿರ್ಜಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರ ತೆರದು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದಿಂದ ಮೂಲ ಸೌಕರ್ಯ ಒದಗಿಸಲಾಗುತ್ತಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು-ಗರ್ಭಗುಡಿ ಸಂಪರ್ಕ ರಸ್ತೆ ತುಂಗಭದ್ರಾ ನೀರಿನಿಂದ ಜಲಾವೃತವಾಗಿದೆ. ಹೂವಿನಹಗಡಲಿ ತಾಲ್ಲೂಕಿನಲ್ಲಿ ನೂರಾರು ಎಕರೆ ಪ್ರದೇಶಗಳಲ್ಲಿ ಬೆಳೆದ ಭತ್ತ, ಅಡಿಕೆ, ಮೆಕ್ಕಜೋಳ ಬೆಳೆಗಳು ಜಲಾವೃತವಾಗಿವೆ.
ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಟಣಮಕಲ್ಲು ಸೇತುವೆ ಹಾಗೂ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಾಯಚೂರು ತಾಲ್ಲೂಕಿನ ಶಕ್ತಿನಗರ ಬಳಿಯ ಗುರ್ಜಾಪುರ ಬ್ಯಾರೇಜ್ ಶನಿವಾರ ಸಂಜೆ ಮುಳುಗಡೆಯಾಗಿದೆ.
136 ವಿದ್ಯುತ್ ಕಂಬ ಧರೆಗೆ (ಮಡಿಕೇರಿ ವರದಿ): ಕೊಡಗು ಜಿಲ್ಲೆಯಲ್ಲಿ ಮಳೆ ತಗ್ಗಿದ್ದು, ಬಿರುಗಾಳಿಯ ತೀವ್ರತೆ ಕಡಿಮೆಯಾಗಿಲ್ಲ.
ಜೋರಾದ ಗಾಳಿಯಿಂದಾಗಿ ಭಾನುವಾರ ಜಿಲ್ಲೆಯಲ್ಲಿ ಒಟ್ಟು 136 ವಿದ್ಯುತ್ ಕಂಬಗಳು ಉರುಳಿದ್ದು, 6 ಮನೆಗಳಿಗೆ ಹಾನಿಯಾಗಿದೆ. ಹಲವೆಡೆ ಅಂಗಡಿಗಳ ನಾಮಫಲಕಗಳು, ಮನೆಗಳ ಶೀಟ್‌ಗಳು ಹಾರಿ ಹೋಗಿವೆ. ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡಲು ಹೆದರುವಂತಾಗಿದೆ.
ಶಿರೂರು:ಲಾರಿ ಪತ್ತೆ ಕಾರ್ಯ ತಾತ್ಕಾಲಿಕ ಸ್ಥಗಿತ
ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾಗಿರುವ ಲಾರಿ ಮತ್ತು ಮೂವರಿಗಾಗಿ ಗಂಗಾವಳಿ ನದಿಯಲ್ಲಿ ನಡೆಸಲಾಗುತ್ತಿದ್ದ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ‘ನದಿಯ ಹರಿವು ರಭಸವಾಗಿದೆ. ಮುಳುಗು ತಜ್ಞರು ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನದಿಯ ಹರಿವು ಕಡಿಮೆ ಆಗುವವರೆಗೂ ಕಾರ್ಯಾಚರಣೆ ನಿಲ್ಲಿಸಲಾಗುತ್ತಿದೆ’ ಎಂದು ಭಾನುವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಘೋಷಿಸಿದರು.
ಕಾರ್ಯಾಚರಣೆಗೆ ಬಂದಿದ್ದ ಈಶ್ವರ ಮಲ್ಪೆ ನೇತೃತ್ವದ ತಂಡವು ಎರಡನೇ ದಿನವೂ ನದಿಯಲ್ಲಿ ಮುಳುಗಿ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿತು. ನೌಕಾದಳದ ಮುಳುಗು ತಜ್ಞರು ಎನ್.ಡಿ.ಆರ್.ಎಫ್ ಎಸ್.ಡಿ.ಆರ್.ಎಫ್ ಸಿಬ್ಬಂದಿಯ ಜತೆಗೆ ಸ್ಥಳೀಯ ಮೀನುಗಾರರು ನೆರವು ನೀಡಿದರು.
‘14 ಬಾರಿ ನದಿಯಲ್ಲಿ ಮುಳುಗಿದೆ. ಗುಡ್ಡ ಕುಸಿತದ ರಭಸಕ್ಕೆ ನದಿ ಸೇರಿರುವ ಆಲದ ಮರ ಚಹಾ ಅಂಗಡಿಯ ಹಲವು ಅವಶೇಷಗಳಿರುವುದನ್ನು ಪತ್ತೆ ಹಚ್ಚಲಾಯಿತು. ಆದರೆ ಅವುಗಳು ಕಲ್ಲು ಮಣ್ಣಿನ ರಾಶಿಯ ಮಧ್ಯೆ ಸಿಲುಕಿಕೊಂಡಿವೆ. ರಭಸ ಇದ್ದ ಕಾರಣ ಹೆಚ್ಚು ಹೊತ್ತು ಆಳದಲ್ಲಿ ಇರಲು ಆಗಿಲ್ಲ’ ಎಂದು ಈಶ್ವರ ಮಲ್ಪೆ ಪ್ರತಿಕ್ರಿಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ‘ನದಿ ರಭಸ ಇಳಿದ ನಂತರ ಕಾರ್ಯಾಚರಣೆ ಪುನಃ ಆರಂಭಿಸುತ್ತೇವೆ ಕಣ್ಮರೆಯಾದವರನ್ನು ಹುಡುಕುವವರೆಗೆ ಕಾರ್ಯಾಚರಣೆ ನಿಲ್ಲದು’ ಎಂದರು. ‘ಕಣ್ಮರೆಯಾಗಿರುವವರ ಪತ್ತೆಯಾಗುವವರೆಗೆ ಕಾರ್ಯಾಚರಣೆ ನಡೆಸಬೇಕು’ ಎಂದು ಕೇರಳದ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಒತ್ತಾಯಿಸಿದ್ದಾರೆ.
ಕೆಆರ್‌ಎಸ್: ಆಷಾಢದಲ್ಲಿ ಬಾಗಿನ ಇದೇ ಮೊದಲು
ಶ್ರೀರಂಗಪಟ್ಟಣ (ಮಂಡ್ಯ): ತಾಲ್ಲೂಕಿನ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟೆ ಭರ್ತಿಯಾದ ಸಂದರ್ಭದಲ್ಲಿ ಬಾಗಿನ ಅರ್ಪಿಸುವ ಸಂಪ್ರದಾಯ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಕಾಲದಿಂದ ನಡೆದುಕೊಂಡು ಬಂದಿದೆ. ಆಷಾಢ ಮಾಸದಲ್ಲಿ ಜರುಗುತ್ತಿರುವುದು ಇದೇ ಮೊದಲು.
ಶ್ರಾವಣ ಅಥವಾ ಬಾದ್ರಪದ ಮಾಸದಲ್ಲಿ ಜಲಾಶಯ ಭರ್ತಿಯಾಗುತ್ತಿತ್ತು. ಈ ಹಿಂದೆ ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬ ಸಮೀಪವಿದ್ದಾಗ ಬಾಗಿನ ಅರ್ಪಣೆ ನಡೆಯುತ್ತಿತ್ತು. ಈ ಬಾರಿ ಅಣೆಕಟ್ಟೆ ಮುಂಚಿತವಾಗಿ ಭರ್ತಿಯಾಗಿದೆ. 1989ರಿಂದ, ಅಂದರೆ 35 ವರ್ಷಗಳಿಂದ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಅವರೇ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ.
ಜುಲೈ 29ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಸಮರ್ಪಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.