ADVERTISEMENT

ಮಳೆ: ಸವದತ್ತಿ ಕೋಟೆಯ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 11:38 IST
Last Updated 12 ಅಕ್ಟೋಬರ್ 2020, 11:38 IST
   
""

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿಯಿಂದ ಜಿಟಿಜಿಟಿ ಮಳೆಯಾಯಿತು.

ಬೈಲಹೊಂಗಲ, ಹಿರೇಬಾಗೇವಾಡಿ, ಸವದತ್ತಿ, ರಾಮದುರ್ಗ, ಅಥಣಿ, ಗೋಕಾಕ, ಎಂ.ಕೆ. ಹುಬ್ಬಳ್ಳಿ, ಹಾರೂಗೇರಿಯಲ್ಲಿ ಸೋಮವಾರವೂ ಮಳೆ ಬಿದ್ದಿತು. ನಗರದಲ್ಲಿ ಆಗಾಗ ಸಾಧಾರಣ ಮಳೆ ಬಿದ್ದಿತು. ಸಂಪೂರ್ಣ ಮೋಡ ಕವಿದಿದ್ದರಿಂದ ಮುಸ್ಸಂಜೆಯ ರೀತಿಯ ವಾತಾವರಣವಿತ್ತು.

ದಟ್ಟ ಮಂಜಿನ ವಾತಾವರಣ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಹಾರಾಟಕ್ಕೂ ತೊಂದರೆಯಾಯಿತು. ‘ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ತಿರುಪತಿ–ಬೆಳಗಾವಿ, ಹೈದರಾಬಾದ್–ಬೆಳಗಾವಿ ಮತ್ತು ಬೆಂಗಳೂರು–ಬೆಳಗಾವಿ ವಿಮಾನಗಳನ್ನು ಕ್ರಮವಾಗಿ ತಿರುಪತಿ, ಹುಬ್ಬಳ್ಳಿ ಹಾಗೂ ಹೈದರಾಬಾದ್‌ನಲ್ಲಿ ಇಳಿಸಲಾಗಿದೆ. ಮಂಜು ಹೆಚ್ಚಿನ ಪ್ರಮಾಣದಲ್ಲಿ ಇದ್ದಿದ್ದರಿಂದ ಇಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗಿಲ್ಲ’ ಎಂದುವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಸತತ ಮಳೆಯಿಂದಾಗಿ ಸವದತ್ತಿಯ ಐತಿಹಾಸಿಕ ಮಹತ್ವದ ಕೋಟೆಯ ಪ್ರವೇಶ ದ್ವಾರದ ಬಳಿ ಹಾಗೂ ಕೋಟೆಯೊಳಗಿನ ಬಾವಿ ಸಮೀಪದ ಗೋಡೆಗಳು ಶಿಥಿಲಗೊಂಡಿದ್ದು, ಭಾಗಶಃ ಕುಸಿದುಬಿದ್ದಿವೆ.

ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಹುಕ್ಕೇರಿಯ ಹಳ್ಳದಕೇರಿ ಮತ್ತು ಗಾಂಧಿ ನಗರದಲ್ಲಿ 35 ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಶಾಸಕ ಉಮೇಶ ಕತ್ತಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು. ಸಂತ್ರಸ್ತರಿಗೆ ಪರಿಹಾರ ಕೇಂದ್ರ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.