
ಹುಕ್ಕೇರಿ: ಪ್ರಸ್ತುತ ಪರಿಸರ ಸವಾಲುಗಳನ್ನು ಎದುರಿಸಲು ನವೀಕರಿಸಬಹುದಾದ ಇಂಧನ ಬಳಕೆ ಹಾಗೂ ಮಳೆನೀರು ಕೊಯ್ಲು ಅತಿ ಅವಶ್ಯಕ ಎಂದು ಹೊಸಪೇಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಲಕಂಠ ಕುಲಕರ್ಣಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಿಡಕಲ್ ಡ್ಯಾಂನ ಶಕ್ತಿ ಸದನ ಮಹಿಳಾ ಕೇಂದ್ರದ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡ ನವೀಕರಿಸಬಹುದಾದ ಇಂಧನ ಕುರಿತ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಸೌರಶಕ್ತಿ, ಪವನಶಕ್ತಿ, ಜೈವಿಕ ಇಂಧನದಂತಹ ನವೀಕರಿಸಬಹುದಾದ ಇಂಧನ ಮೂಲಗಳು ಪರಿಸರ ಸ್ನೇಹಿಯಾಗಿದ್ದು, ಇಂಧನ ಕೊರತೆ ನಿವಾರಣೆಗೆ ದೀರ್ಘಕಾಲಿಕ ಪರಿಹಾರವಾಗಿವೆ ಎಂದು ತಿಳಿಸಿದರು.
ತರಬೇತುದಾರ ಸುರೇಖಾ ಪಾಟೀಲ ಘನ ಕಸ ನಿರ್ವಹಣೆ ಎಂದರೆ ಮನೆಗಳು, ಕಚೇರಿಗಳು, ಮಾರುಕಟ್ಟೆಗಳು ಹಾಗೂ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ವಿಂಗಡಿಸಿ ಮತ್ತು ವಿಲೇವಾರಿ ಮಾಡುವ ಪ್ರಕ್ರಿಯೆಯಾಗಿದೆ. ಇದು ಪರಿಸರ ಸಂರಕ್ಷಣೆಯಲ್ಲೂ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸರಿಯಾದ ಕಸ ನಿರ್ವಹಣೆಯ ಕೊರತೆಯಿಂದ ವಾತಾವರಣ ಮಾಲಿನ್ಯ, ದುರ್ವಾಸನೆ ಮತ್ತು ರೋಗಗಳ ಹರಡುವಿಕೆ ಹೆಚ್ಚಾಗುತ್ತಿದೆ. ಕಸವನ್ನು ಎಲ್ಲಿ ಬೇಕಾದರೂ ಎಸೆಯದೆ ನಿಗದಿತ ಸ್ಥಳಗಳಲ್ಲಿ ಹಾಕುವುದು ಅಗತ್ಯ ಎಂದು ಮಾಹಿತಿ ನೀಡಿದರು. ಸುಗಂಧಾ ಅಲ್ಲಟ್ಟಿ, ದ್ರಾಕ್ಷಾಯಣಿ ಮಠಪತಿ, ಬಸವರಾಜ ಮನ್ನಿಕೇರಿ ತರಬೇತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.