ADVERTISEMENT

ತಿಂಗಳಷ್ಟೇ ಸಿಗಲಿದೆ ರಕ್ಕಸಕೊಪ್ಪ ನೀರು!

ಇತರ ಮೂಲಗಳಿಂದ ವ್ಯವಸ್ಥೆಗೆ ನೀರು ಸರಬರಾಜು ಮಂಡಳಿ ಕ್ರಮ

ಎಂ.ಮಹೇಶ
Published 29 ಏಪ್ರಿಲ್ 2019, 19:30 IST
Last Updated 29 ಏಪ್ರಿಲ್ 2019, 19:30 IST
   

ಬೆಳಗಾವಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲಮೂಲಗಳಲ್ಲಿ ಒಂದಾದ ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯದಲ್ಲಿ ಸಂಗ್ರಹವಿರುವ ನೀರು ಬಹುತೇಕ ಇನ್ನೊಂದು ತಿಂಗಳಷ್ಟೇ ಸಾಕಾಗಲಿದೆ. ಮಳೆ ಬಾರದಿದ್ದರೆ ಪರಿಸ್ಥಿತಿ ಬಿಗಡಾಯಿಸುವ ಮತ್ತು ಜೀವಜಲಕ್ಕಾಗಿ ತತ್ವಾರ ಉಂಟಾಗುವ ಸಾಧ್ಯತೆಗಳಿವೆ.

ಇಲ್ಲಿಗೆ ಹಿಡಕಲ್‌ ಜಲಾಶಯದಿಂದ 12 ಎಂಜಿಡಿ (ಮಿಲಿಯನ್ ಗ್ಯಾಲನ್ಸ್‌ ಪರ್ ಡೇ) ಹಾಗೂ ರಕ್ಕಸಕೊಪ್ಪ ಜಲಾಶಯದಿಂದ 12 ಎಂಜಿಡಿ ಸೇರಿ ಒಟ್ಟು 24 ಎಂಜಿಡಿ ನೀರನ್ನು ಪೂರೈಸಲಾಗುತ್ತದೆ. ಇದರಲ್ಲಿ 5 ಎಂಜಿಡಿಯನ್ನು ಕಾರ್ಖಾನೆಗಳು, ವಿವಿಧ ಸಂಸ್ಥೆಗಳು ಮೊದಲಾದವುಗಳಿಗೆ ನೀಡಲಾಗುತ್ತದೆ. ಉಳಿದ 19 ಎಂಜಿಡಿಯನ್ನು ಇಡೀ ನಗರಕ್ಕೆ ಪೂರೈಸಬೇಕಾಗುತ್ತದೆ. ಸದ್ಯ ನಿತ್ಯ 24 ಎಂಜಿಡಿ ನೀರು ಲಭ್ಯವಾಗುತ್ತಿದೆ. ಇದರಿಂದಾಗಿ ಹೆಚ್ಚಿನ ತೊಂದರೆ ಆಗುತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇರುತ್ತದೆ ಎಂದು ಹೇಳುವಂತಿಲ್ಲ.

ಏಕೆಂದರೆ, ರಕ್ಕಸಕೊಪ್ಪದಲ್ಲಿರುವ ನೀರು ಜೂನ್‌ ಮೊದಲ ವಾರದವರೆಗಷ್ಟೇ ಸಾಕಾಗಲಿದೆ. ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಕೈಕೊಟ್ಟರೆ, ಡೆಡ್‌ ಸ್ಟೋರೇಜ್‌ನಲ್ಲಿರುವ ಹೂಳು ಮಿಶ್ರಿತ ನೀರನ್ನು ಪಂಪ್‌ ಮಾಡಬೇಕಾಗುತ್ತದೆ. ಅದು ಕೂಡ 10 ದಿನಗಳಿಗಷ್ಟೇ ಸಾಕಾಗಲಿದೆ.

ADVERTISEMENT

2 ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು

ನಗರದಲ್ಲಿ 10 ವಾರ್ಡ್‌ಗಳಲ್ಲಿ 24x7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅಲ್ಲಷ್ಟೇ ನಿತ್ಯವೂ ನೀರು ಸರಬರಾಜು ಮಾಡಲಾಗುತ್ತಿದೆ. ಹೊರವಲಯದಲ್ಲಿರುವ 50 ಹಾಗೂ 51ನೇ ವಾರ್ಡ್‌ಗಳಲ್ಲಿ 8 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಪ್ರದೇಶದ ಜನರು ನೀರನ್ನು ಸಂಗ್ರಹಿಸಿಟ್ಟುಕೊಂಡು ಬಳಸುತ್ತಿದ್ದಾರೆ. ನಳಗಳಿಗೆ ನೀರು ಬಿಡುವುದನ್ನೇ ಕಾಯುವಂತಾಗಿದೆ.

ಅಲ್ಲದೇ, 40ನೇ ವಾರ್ಡ್‌ನ ಭಾಗಶಃ ‍ಪ್ರದೇಶಗಳಲ್ಲಿ 6 ದಿನಗಳಿಗೊಮ್ಮೆ ಹಾಗೂ ಉಳಿದ ವಾರ್ಡ್‌ಗಳಲ್ಲಿ 5 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಮೇ ಅಂತ್ಯ ಅಥವಾ ಜೂನ್‌ ಆರಂಭದ ವೇಳೆಗೆ ನೀರಿನ ಲಭ್ಯತೆಯ ಪ್ರಮಾಣದಲ್ಲಿ ಕಡಿಮೆಯಾಗುವುದರಿಂದ, ಎಲ್ಲ ಕಡೆಗಳಲ್ಲೂ ಸರಾಸರಿ 8 ದಿನಗಳಿಗೊಮ್ಮೆ ನೀರು ಪೂರೈಸಬೇಕಾದ ಪರಿಸ್ಥಿತಿ ಬರಬಹುದು ಎಂದು ಅಂದಾಜಿಸಲಾಗಿದೆ.

‘ನಗರದ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ರಕ್ಕಸಕೊಪ್ಪ ಜಲಾಶಯದಲ್ಲಿ ಜೂನ್‌ ಮೊದಲ ವಾರದವರೆಗೆ ನೀರು ಲಭ್ಯವಾಗಲಿದೆ. ನಂತರವೂ ಮಳೆ ಬಾರದಿದ್ದಲ್ಲಿ ಹಿಡಕಲ್‌ ಜಲಾಶಯವನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ. ಅಲ್ಲಿಂದ ಕುಡಿಯುವ ಉದ್ದೇಶಕ್ಕಾಗಿ ನೀರು ಪಡೆಯಲು ಯಾವುದೇ ತೊಂದರೆ ಇಲ್ಲ’ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ (ಕೆಯುಡಬ್ಲ್ಯುಎಸ್‌ಎಸ್‌ಬಿ) ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ಎಲ್. ಚಂದ್ರ‍ಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೊಸದಾಗಿ 35 ಕೊಳವೆಬಾವಿ

‘ವಿವಿಧೆಡೆ ಹೊಸದಾಗಿ 35 ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ಹಾಲಿ ಲಭ್ಯವಿರುವ 629 ಕೊಳವೆಬಾವಿಗಳನ್ನು ಬಳಸಿಕೊಳ್ಳಲು ಕ್ರಮ ವಹಿಸಲಾಗಿದೆ. 800ಕ್ಕೂ ಹೆಚ್ಚಿನ ಸಿಂಟೆಂಕ್ಸ್‌ ಟ್ಯಾಂಕ್‌ಗಳಿದ್ದು, ಅವುಗಳಲ್ಲಿ ಲಭ್ಯವಾಗುವ ನೀರನ್ನು ಸ್ವಚ್ಛತೆ ಮೊದಲಾದ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ. ಮಳೆ ಕೈಕೊಟ್ಟರೆ ಅದನ್ನೂ ಸಂಸ್ಕರಿಸಿ ಪೂರೈಸಬೇಕಾಗುತ್ತದೆ. 24 ಬಾವಿಗಳಿದ್ದು, ಅವುಗಳಲ್ಲಿ ಬಹುತೇಕವು ಬಳಕೆಗೆ ಯೋಗ್ಯವಿಲ್ಲದಂತಾಗಿವೆ. ಹೀಗಾಗಿ, ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಪ್ರಸ್ತುತ ನೀರು ಪೂರೈಕೆಗೆ ತೊಂದರೆ ಇಲ್ಲ. ಪೈಪ್‌ಲೈನ್‌ನಲ್ಲಿ ತೊಂದರೆ ಮೊದಲಾದ ಅಡಚಣೆಗಳು ಉಂಟಾದರಷ್ಟೇ ಸಂಬಂಧಿಸಿದ ಪ್ರದೇಶಗಳಿಗೆ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುವುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.