ರಾಮದುರ್ಗ: ರಾಮದುರ್ಗದ ಈರಮ್ಮ ಯಾದವಾಡ ಕಾಲೇಜಿನಲ್ಲಿ ನಾಲ್ಕು ದಿನ ನಡೆದ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ 6 ಅಂಕ ಪಡೆದ ತಮಿಳುನಾಡಿನ ಎಸ್ಆರ್ಎಂ ವಿಶ್ವವಿದ್ಯಾಲಯ ಪ್ರಥಮ ಸ್ಥಾನ ಪಡೆದುಕೊಂಡಿದೆ.
ತೀವ್ರ ಪೈಪೋಟಿಯಲ್ಲಿ 4 ಅಂಕ ಪಡೆದ ಕರ್ನಾಟಕದ ಮೈಸೂರು ವಿಶ್ವವಿದ್ಯಾಲಯ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆಯಿತು. 2 ಅಂಕ ಪಡೆದ ತಮಿಳುನಾಡಿನ ಪ್ರಿಸ್ಟ್ ವಿಶ್ವವಿದ್ಯಾಲಯ ತೃತೀಯ ಮತ್ತು ಲೀಗ್‌ನಲ್ಲಿ ಒಂದೂ ಅಂಕ ಪಡೆಯದ ಸೆಲಂನ ವಿನಾಯಕ ರಿಸರ್ಚ್ ಫೌಂಡೇಷನ್ ವಿಶ್ವವಿದ್ಯಾಲಯ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ, ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಸ್ಥಳೀಯ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಅ.4ರಿಂದ 7ರ ವರೆಗೆ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ, ತಮಿಳುನಾಡು. ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ವಿಶ್ವ ವಿದ್ಯಾಲಯಗಳ 117 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ನಾಕೌಟ್ ಹಂತದಲ್ಲಿ ಪಂದ್ಯ ಆರಂಭವಾಗಿ ಲೀಗ್ ಹಂತದಲ್ಲಿ ಮುಕ್ತಾಯವಾದವು.
ಕರ್ನಾಟಕದ ಮೈಸೂರು ವಿಶ್ವವಿದ್ಯಾಲಯ, ತಮಿಳುನಾಡಿನ ಎಸ್ಆರ್ಎಂ ವಿಶ್ವವಿದ್ಯಾಲಯ, ತಂಜಾವೂರಿನ ಪ್ರಿಸ್ಟ್ ವಿಶ್ವವಿದ್ಯಾಲಯ ಮತ್ತು ಸೆಲಂ ವಿನಾಯಕ ರಿಸರ್ಚ ಪೌಂಡೇಶನ್ ವಿಶ್ವವಿದ್ಯಾಲಯದ ತಂಡಗಳು ಲೀಗ್ ಹಂತದಲ್ಲಿ ಪ್ರವೇಶ ಪಡೆದು ಅಂತಿಮ ಹಂತದಲ್ಲಿ ಸೆಣಸಾಡಿದವು. ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಾಲ್ಕು ತಂಡಗಳು ಕಬಡ್ಡಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.
ಪಂದ್ಯದಲ್ಲಿ ಮೈಸೂರು ವಿಶ್ವವಿದ್ಯಾಲಯ ತಂಡ ಪೃಥ್ವಿರಾಜ್ ಶಿಂಧೆ ಸರ್ವೋತ್ತಮ ಆಟಗಾರ ಎಂದು ಆಯ್ಕೆಗೊಂಡರು. ತಮಿಳುನಾಡು ವಿಶ್ವವಿದ್ಯಾಲಯ ತಂಡದ ದರನಿದರನ್ ಉತ್ತಮ ದಾಳಿಕಾರ ಮತ್ತು ತಮಿಳುನಾಡಿನ ಪ್ರಿಸ್ಟ್ ವಿಶ್ವವಿದ್ಯಾಲಯದ ಮಣಿಕಂಠನ್ ಉತ್ತಮ ಹಿಡಿತಗಾರ ಪ್ರಶಸ್ತಿಗೆ ಆಯ್ಕೆಗೊಂಡರು.
ವಿಜೇತ ತಂಡಗಳಿಗೆ ಈರಮ್ಮ ಯಾದವಾಡ ಪ್ರಥಮ ದರ್ಜೆ ಕಾಲೇಜು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ, ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಟ್ರೋಪಿ ನೀಡಿ ಗೌರವಿಸಿದರು. ಶ್ರೀಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಪ್ರಾಚಾರ್ಯ ಎಂ.ಡಿ. ಕಮತಗಿ, ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಜಗದೀಶ ಗಸ್ತಿ, ಪ್ರದೀಪ ಪಟ್ಟಣ, ದೈಹಿಕ ನಿದೇರ್ಶಕ ಕೆ.ಎಂ.ಸಾರವಾನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.