ADVERTISEMENT

ಟೂರಿಂಗ್ ಟಾಕೀಸ್ ಆದ ಬೆಳಗಾವಿ ಅಧಿವೇಶನ: ರಮೇಶ್ ಕತ್ತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 2:37 IST
Last Updated 13 ಡಿಸೆಂಬರ್ 2025, 2:37 IST
ರಮೇಶ್ ಕತ್ತಿ
ರಮೇಶ್ ಕತ್ತಿ   

ಹುಕ್ಕೇರಿ: ‘ಜನರ ಭಾವನೆಗಳಿಗೆ ಸ್ಪಂದಿಸುವ ಸರ್ಕಾರಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಬೆಳಗಾವಿ ಅಧಿವೇಶನ ಎಂಬುದು ಟೂರಿಂಗ್ ಟಾಕೀಸ್ ಎಂಬ ಹಣೆಪಟ್ಟಿ ಪಡೆದುಕೊಂಡಿದೆ’ ಎಂದು ಮಾಜಿ ಸಂಸದ ರಮೇಶ ಕತ್ತಿ ಆರೋಪಿಸಿದರು.

ಶುಕ್ರವಾರ ಅಮ್ಮಣಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 2006ರಿಂದ ಇಲ್ಲಿವರೆಗೆ 13 ಅಧಿವೇಶನಗಳು ನಡೆದಿವೆ. ಈಗ 14ನೇ ಅಧಿವೇಶನವೂ ಅರ್ಧದಷ್ಟು ಪೂರ್ಣಗೊಂಡಿದ್ದು, ಸರ್ಕಾರಗಳು ಬೆಳಗಾವಿಯಲ್ಲಿ ನಡೆಸಿದ ಅಧಿವೇಶನಗಳು ಉತ್ತರ ಕರ್ನಾಟಕಕ್ಕೆ ಏನು ಅನುಕೂಲ ಒದಗಿಸಿವೆ ಎಂಬುದು ಜನರಿಗೆ ಗೊತ್ತಾಗಬೇಕು’ ಎಂದು ಆಗ್ರಹಿಸಿದರು.

‘ಬೆಂಗಳೂರಿನಿಂದ ಬೆಳಗಾವಿಗೆ ಬರುವ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳು ಸುತ್ತಲಿನ ಜಿಲ್ಲೆಗಳಲ್ಲಿರುವ ಪರಿಸ್ಥಿತಿ ಅವಲೋಕಿಸಿ ಸರ್ಕಾರಕ್ಕೆ ವರದಿ ಒಪ್ಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಿದಲ್ಲಿ ಇಲ್ಲಿನ ಜನರ ಬದುಕಿನಲ್ಲಿ ಬದಲಾವಣೆ ತರಬಹುದು’ ಎಂದರು.

ADVERTISEMENT

‘ಉತ್ತರ ಕರ್ನಾಟಕದ ಅಭಿವೃದ್ಧಿ ಬಗೆಗೆ ವಾದಿಸುವ ಜನಪ್ರತಿನಿಧಿಗಳನ್ನು ವೈರಿಗಳಂತೆ ಕಾಣುವ ಎಲ್ಲ ಪಕ್ಷಗಳ ಹಾಗೂ ನಾಯಕರ ಧೋರಣೆ ಬದಲಾಗಬೇಕು. ಜನರಲ್ಲಿನ ಆಶಾವಾದ ವರ್ಷದಿಂದ ವರ್ಷಕ್ಕೆ ಕ್ಷೀಣಗೊಳ್ಳುತ್ತಲಿದ್ದು, ಈ ಭಾಗದ ಎಲ್ಲ ಜನಪ್ರತಿನಿಧಿಗಳು ತಮ್ಮ ವಾದ ಮಂಡಿಸುವ ಮೂಲಕ ಇನ್ನಷ್ಟು ಒತ್ತಡ ತರುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಶ್ರಮಿಸಬೇಕು’ ಎಂದರು.

ಜಿಲ್ಲೆ ವಿಭಜಿಸಿ: ‘ಬೆಳಗಾವಿ ಜಿಲ್ಲಾ ವಿಭಜನೆಗೆ ಮಠಾಧೀಶರು, ಹಿರಿಯರು ನಾಯಕರು, ಹಾಲಿ‌- ಮಾಜಿ ಶಾಸಕ, ಸಂಸದರ ನೇತೃತ್ವದಲ್ಲಿ ತಾಲ್ಲೂಕುಮಟ್ಟದ ಸಭೆ ನಡೆಸಿ, ಕಾನೂನು ತಜ್ಞರ ಸಲಹೆ ಪಡೆದು ಭೌಗೋಳಿಕವಾಗಿ ಜನರಿಗೆ ಅನುಕೂಲ ಒದಗಿಸುವ ಪ್ರದೇಶಗಳನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವ ಮೂಲಕ ಸರ್ಕಾರ ಚಳಿಗಾಲದ ಅಧಿವೇಶನಕ್ಕೆ ಸಾರ್ಥಕತೆ ಕಂಡುಕೊಳ್ಳಬೇಕು’ ಎಂದರು.

ಯುವ ಧುರೀಣ ವಿನಯ ಪಾಟೀಲ, ಬಸವಣ್ಣಿ ನಾಗನೂರಿ, ಪ್ರಶಾಂತ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.