ADVERTISEMENT

ರಂಜಾನ್‌: ಕಳೆಗಟ್ಟಿದ ಕುಂದಾನಗರಿ ಮಾರುಕಟ್ಟೆ, ಖರ್ಜೂರ, ಒಣಹಣ್ಣುಗಳಿಗೆ ಬೇಡಿಕೆ

ಇಮಾಮ್‌ಹುಸೇನ್‌ ಗೂಡುನವರ
Published 23 ಏಪ್ರಿಲ್ 2022, 19:30 IST
Last Updated 23 ಏಪ್ರಿಲ್ 2022, 19:30 IST
ಬೆಳಗಾವಿ ಮಾರುಕಟ್ಟೆಗೆ ಬಂದಿರುವ ಒಣಹಣ್ಣುಗಳು ಹಾಗೂ ಶಾವಿಗೆ ಉತ್ಪನ್ನಗಳು
ಬೆಳಗಾವಿ ಮಾರುಕಟ್ಟೆಗೆ ಬಂದಿರುವ ಒಣಹಣ್ಣುಗಳು ಹಾಗೂ ಶಾವಿಗೆ ಉತ್ಪನ್ನಗಳು   

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಆಚರಿಸುವ ಪ್ರತಿ ಹಬ್ಬವೂ ವಿಶಿಷ್ಟವಾದುದು. ಈಗ ಮುಸ್ಲಿಮರ ‍ಪವಿತ್ರ ಹಬ್ಬ ‘ರಂಜಾನ್‌’ ಅಂಗವಾಗಿ ನಗರದ ಮಾರುಕಟ್ಟೆ ಕಳೆಗಟ್ಟಿದ್ದು, ಖರ್ಜೂರ ಮತ್ತು ಒಣಹಣ್ಣುಗಳಿಗೆ(ಡ್ರೈಫ್ರೂಟ್ಸ್‌) ಹೆಚ್ಚಿನ ಬೇಡಿಕೆ ಇದೆ.

ಬಗೆಬಗೆಯ ಮಾಂಸಾಹಾರಿ ಖಾದ್ಯಗಳು ಜನರ ಬಾಯಲ್ಲಿ ನೀರೂರಿಸುತ್ತಿವೆ. ಕೊರೊನಾ ಆತಂಕದಿಂದಾಗಿ ಕಳೆದೆರಡು ವರ್ಷ ಮಂಕಾಗಿದ್ದ ಹಬ್ಬದ ಸಂಭ್ರಮ, ಈ ಬಾರಿ ಇಮ್ಮಡಿಯಾಗಿದೆ.

ಖಡೇಬಜಾರ್‌, ದರ್ಬಾರ್‌ ಗಲ್ಲಿ, ಖಂಜರ್‌ ಗಲ್ಲಿ ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಗಳು ವಿದ್ಯುತ್‌ ದೀಪಗಳ ಅಲಂಕಾರದಿಂದ ಝಗಮಗಿಸುತ್ತಿವೆ. ವಿವಿಧ ವಸ್ತುಗಳ ಖರೀದಿಗಾಗಿ ಬೆಳಗಾವಿಗರ ಜೊತೆ ಮಹಾರಾಷ್ಟ್ರ ಮತ್ತು ಗೋವಾದಿಂದಲೂ ಜನರು ಬರುತ್ತಿದ್ದಾರೆ. ಸಂಜೆ ನಂತರ ಚುರುಕು ಪಡೆಯುತ್ತಿರುವ ವ್ಯಾಪಾರ–ವಹಿವಾಟು ತಡರಾತ್ರಿವರೆಗೂ ನಡೆಯುತ್ತಿದೆ.

ADVERTISEMENT

25 ವಿಧದ ಖರ್ಜೂರ:‘ರಂಜಾನ್‌’ ಅಂಗವಾಗಿ ಮುಸ್ಲಿಮರು ಒಂದು ತಿಂಗಳು ಉಪವಾಸ ವ್ರತ(ರೋಜಾ) ಕೈಗೊಳ್ಳುತ್ತಾರೆ. ಪ್ರವಾದಿ ಮುಹಮ್ಮದ್‌ ಪೈಗಂಬರ್‌ ಅವರು ಇಫ್ತಾರ್‌ ವೇಳೆ, ಖರ್ಜೂರ ಸೇವಿಸಿ ರೋಜಾ ಮುಕ್ತಾಯಗೊಳಿಸುತ್ತಿದ್ದರು. ಹಾಗಾಗಿ ಮಸೀದಿಗಳು ಹಾಗೂ ಮನೆಗಳಲ್ಲಿ ಸಂಜೆ ಆಯೋಜನೆಗೊಳ್ಳುತ್ತಿರುವ ಇಫ್ತಾರ್‌ ಕೂಟಗಳಲ್ಲಿ ಖರ್ಜೂರಕ್ಕೆ ಅಗ್ರಸ್ಥಾನ.

‘ಬೆಳಗಾವಿ ಮಾರುಕಟ್ಟೆಗೆ ಸೌದಿಅರೇಬಿಯಾದಿಂದ ಕಲ್ಮಿ, ಸುಲ್ತಾನ್‌, ಕಿಮಿಯಾ, ಅಝ್ವಾ, ಫರ್ದ್‌, ಅಮೀರ್‌, ಹರ್ಮನಿ, ಜನ್ನತ್‌, ಡೋಬ್ರಾ ಸೇರಿ 25ಕ್ಕೂ ಅಧಿಕ ಬಗೆಯ ಖರ್ಜೂರ ಬಂದಿವೆ. ಪ್ರತಿ ಕೆ.ಜಿ.ಗೆ ಸರಾಸರಿ ₹100ರಿಂದ ₹2,000ವರೆಗೆ ದರವಿದೆ. ಮುಸ್ಲಿಮರಷ್ಟೇ ಅಲ್ಲ, ಹಿಂದೂಗಳು ತಮ್ಮಿಷ್ಟದ ಖರ್ಜೂರ ಖರೀದಿಸುತ್ತಿದ್ದಾರೆ’ ಎಂದು ಖಡೇಬಜಾರ್‌ನ ವ್ಯಾಪಾರಿ ಮುದಸ್ಸರ್‌ ಮುಜಾವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹೈದರಾಬಾದ್‌ ಶಾವಿಗೆ:ರಂಜಾನ್‌ ಹಬ್ಬದಂದು ಮುಸ್ಲಿಮರು ತಮ್ಮ ಮನೆಗಳಲ್ಲಿ ‘ಶೀರ್‌ಖುರ್ಮಾ’ ಸಿಹಿ ಖಾದ್ಯ ತಯಾರಿಸುತ್ತಾರೆ. ಇದನ್ನು ತಯಾರಿಸಲು ಬೇಕಾಗುವ ಶಾವಿಗೆ ಉತ್ಪನ್ನಗಳು ಹೈದರಾಬಾದ್‌ನಿಂದ ಮಾರುಕಟ್ಟೆ ಪ್ರವೇಶಿಸಿವೆ.

ಕೆ.ಜಿ.ಗೆ ಸರಾಸರಿ ₹70ರಿಂದ ₹200ವರೆಗಿನ 4 ಬಗೆಯ ಶಾವಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಅಲ್ಲದೆ, ಗೋಡಂಬಿ, ಬಾದಾಮಿ, ಪಿಸ್ತಾ, ಅಖ್ರೋಟ್‌, ಚಾರೂಲಿ, ಅಂಜೀರ್‌, ಒಣದ್ರಾಕ್ಷಿ ಸೇರಿದಂತೆ ಹಲವು ಬಗೆಯ ಒಣಹಣ್ಣುಗಳು ಹೆಚ್ಚಾಗಿ ಬಿಕರಿಯಾಗುತ್ತಿವೆ.

‘ಅಫ್ಗಾನಿಸ್ತಾನ್‌, ಇರಾನ್‌ ಮತ್ತಿತರ ರಾಷ್ಟ್ರಗಳಿಂದ ಒಣಹಣ್ಣುಗಳು ಬಂದಿವೆ. ಎರಡು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಹಿವಾಟು ಉತ್ತಮವಾಗಿದೆ. ಜನರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ರಂಜಾನ್‌ ಮಾಸದ ಕೊನೆಯ ವಾರ ನಿತ್ಯ ಸಂಜೆಯಿಂದ ನಸುಕಿನ ಜಾವದವರೆಗೂ ಖರೀದಿ ಭರಾಟೆ ನಡೆಯುತ್ತದೆ’ ಎನ್ನುತ್ತಾರೆ ಮುದಸ್ಸರ್‌.

ವಿವಿಧ ವಿನ್ಯಾಸಗಳ ಬಟ್ಟೆಗಳು, ಗೃಹೋಪಕರಣಗಳು ಮತ್ತು ಅತ್ತರ್‌ ಮಾರಾಟವೂ ಜೋರಾಗಿದೆ.

ಮಾಂಸಾಹಾರಿ ಖಾದ್ಯಗಳು

ದರ್ಬಾರ್‌ ಗಲ್ಲಿ, ಖಂಜರ್‌ ಗಲ್ಲಿ, ಕೇಂದ್ರ ಬಸ್‌ ನಿಲ್ದಾಣ ಬಳಿ ತಲೆಎತ್ತಿರುವ ಅಂಗಡಿಗಳಲ್ಲಿ ಸಿದ್ಧಪಡಿಸಲಾಗುತ್ತಿರುವ ಮಾಂಸಾಹಾರಿ ಖಾದ್ಯಗಳ ರುಚಿ ಸವಿಯಲು ಜನರು ಮುಗಿಬೀಳುತ್ತಿದ್ದಾರೆ. ಮಸೀದಿಗಳ ಎದುರು ಸೂರ್ಯಾಸ್ತದ ವೇಳೆ, ನೂರಾರು ಸಂಖ್ಯೆಯಲ್ಲಿ ‘ಸಮೋಸಾ’ ಮಾರಾಟವಾಗುತ್ತಿವೆ. ಚಿಕನ್‌ ಮತ್ತು ಮಟನ್‌ ಕಬಾಬ್‌, ತಂದೂರಿ, ಕಟ್‌ಲೆಟ್‌, ಬಿರಿಯಾನಿಯನ್ನು ಜನರು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಕೆಲವರು ವೆಜ್‌ ಸಮೋಸಾ ಸವಿಯುತ್ತಿದ್ದಾರೆ.

ನಿತ್ಯ 14 ತಾಸಿಗೂ ಅಧಿಕ ರೋಜಾ ಕೈಗೊಳ್ಳುವವರು ಫಿರ್ನಿ, ಫಾಲೂದಾ, ಹಣ್ಣಿನ ರಸ ಸೇವನೆಗೆ ಒತ್ತು ನೀಡುತ್ತಿದ್ದಾರೆ.

ಶೇ 20ರಷ್ಟು ಹೆಚ್ಚಾಗಿದೆ

ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಪ್ರತಿ ಉತ್ಪನ್ನಗಳ ದರ ಶೇ.20ರಷ್ಟು ಹೆಚ್ಚಾಗಿದೆ. ಆದರೂ, ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಖರೀದಿಸುತ್ತಿದ್ದೇವೆ.

- ಮುಸ್ತಾಕ್‌ ಕುನ್ನಿಭಾವಿ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.