ADVERTISEMENT

ಡಿಕೆಶಿ ಮನೆಯಲ್ಲೇ ಸಿಬಿಐ ಕಚೇರಿ ತೆರೆಯಿರಿ ಸ್ವಾಮಿ: ರಣದೀಪ್‌ ಸಿಂಗ್‌ ಸುರ್ಜೇವಾಲಾ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 9:14 IST
Last Updated 20 ಡಿಸೆಂಬರ್ 2022, 9:14 IST
ರಣದೀಪ್‌ ಸಿಂಗ್‌ ಸುರ್ಜೇವಾಲಾ
ರಣದೀಪ್‌ ಸಿಂಗ್‌ ಸುರ್ಜೇವಾಲಾ   

ಬೆಳಗಾವಿ:‘ಡಿ.ಕೆ.ಶಿವಕುಮಾರ ಅವರ ಮನೆಯಲ್ಲಿಯೇ ಒಂದು ಐಟಿ, ಇಡಿ, ಸಿಬಿಐ ಕಚೇರಿ ತಗೆದುಬಿಡಿ ಸ್ವಾಮಿ’ ಎಂದುಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರುಬಿಜೆಪಿ ಸರ್ಕಾರವನ್ನು ಚೇಡಿಸಿದರು.

‘ಬೊಮ್ಮಾಯಿ ಸರ್ಕಾರ ಅನೈತಿಕ ಮಾರ್ಗದಿಂದ ಬಂದಿದೆ. ಜನರ ದೃಷ್ಟಿಯಲ್ಲಿ ಬಿಜೆಪಿಯವರು ನೆಲಕ್ಕೆ ಬಿದ್ದಿದ್ದಾರೆ. ಇದನ್ನು ಮರೆ ಮಾಚಲು ಡಿ.ಕೆ.ಶಿವಕುಮಾರ ಅವರ ಮನೆ, ಸಂಸ್ಥೆಗಳ ಮೇಲೆ ಪದೇಪದೇ ದಾಳಿ ಮಾಡಿಸುತ್ತಾರೆ. ಅದರ ಬದಲು ಅವರ ಮನೆಯಲ್ಲೇ ಕಚೇರಿ ತೆಗೆದು ಕುಳಿತುಕೊಳ್ಳುವುದು ಒಳ್ಳೆಯದು’ ಎಂದರು.

‘ಕಾಂಗ್ರೆಸ್‌ ಪಕ್ಷ ಶಿವಕುಮಾರ ಅವರ ಜೊತೆಗಿದೆ. ಅವರನ್ನು ಹೆದರಿಸಲು ಆಗುವುದಿಲ್ಲ. 40 ಶೇಕಡ ಕಮಿಷನ್‌ ತೆಗದುಕೊಳ್ಳುವಲ್ಲಿ ಮುಳುಗಿದ ಈ ಸರ್ಕಾರಕ್ಕೆ ಯಾವ ನೈತಿಕತೆ ಇದೆ? ಬೊಮ್ಮಾಯಿ ಅವರು ಎರಡೂ ಕೈಗಳನ್ನು ಚಾಚಿ ಜನರ ದುಡ್ಡು ಬಾಚಿಕೊಳ್ಳುತ್ತಿದ್ದಾರೆ’ ಎಂದೂ ಅವರು ಆರೋಪಿಸಿದರು.

ತಪ್ಪು ಮಾಡದಿದ್ದರೆ ಭಯ ಏಕೆ?:ಸುರ್ಜೇವಾಲಾ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಜಗದೀಶ ಶೆಟ್ಟರ, ‘ಎಲ್ಲ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತವೆ. ಸರ್ಕರದ ಹೇಳಿಕೆ ಮೇಲಲ್ಲ. ನಿಮ್ಮ ನಾಯಕರು ತಪ್ಪು ಮಾಡಿಲ್ಲವೆಂದರೆ ಭಯ ಪಡಿವ ಅವಶ್ಯಕತೆ ಏನಿದೆ?’ ಎಂದು ಪ್ರಶ್ನಿಸಿದರು.

‘ಬಿಜೆಪಿಯ ಕೆಲ ನಾಯಕರ ಮನೆ– ಸಂಸ್ಥೆಗಳ ಮೇಲೂ ಸಿಬಿಐ ದಾಳಿಗಳು ನಡೆದಿವೆ. ತಪ್ಪು ಮಾಡಿದವರ ಮೇಲೆ ಪ್ರಕರಣ ದಾಖಲಾಗಿವೆ. ನಿಮ್ಮಂತೆ ನಾವು ಬಾಯಿಬಾಯಿ ಬಡೆದುಕೊಂಡಿಲ್ಲ’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.