ಭೂತರಾಮನಹಟ್ಟಿ (ಬೆಳಗಾವಿ ತಾ): ಇಲ್ಲಿನ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಇದರಿಂದ ಉತ್ತೇಜನಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಮೃಗಾಲಯದಲ್ಲಿ ಮತ್ತಷ್ಟು ಆಕರ್ಷಕ ಪ್ರಯೋಗ ಮಾಡಲು ಮುಂದಾಗಿದ್ದಾರೆ. ₹2.61 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳು ಭರದಿಂದ ಸಾಗಿವೆ.
ಈಗಾಗಲೇ ನಾಲ್ಕು ಪ್ರಮುಖ ಕಾಮಗಾರಿಗಳು ಭರದಿಂದ ಸಾಗಿದ್ದು, ನವೆಂಬರ್ ಇಲ್ಲವೇ ಡಿಸೆಂಬರ್ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗಲಿವೆ.
ಏನೇನು ಆರಂಭ: ಮೃಗಾಲಯ ಆವರಣದಲ್ಲಿ ‘ಸರಿಸೃಪಗಳ ಪಾರ್ಕ್’ ಸಿದ್ಧಗೊಳ್ಳುತ್ತಿದೆ. ಇಲ್ಲಿ ವಿವಿಧ 12 ಪ್ರಭೇದದ ಹಾವುಗಳನ್ನು ತರಲಾಗುತ್ತಿದೆ. ಕಾಳಿಂಗ ಸರ್ಪ, ನಾಗರ ಹಾವು, ರಾಕ್ ಪೈಥಾನ್, ರೆಟಿಕ್ಯುರೇಟೆಡ್ ಪೈಥಾನ್ (ಹೆಬ್ಬಾವು), ಗ್ರೀನ್ ಅನಕೊಂಡ, ಕೆರೆ ಹಾವು, ಮಣ್ಮುಖ ಹಾವು; ಈ ಎಲ್ಲ ಹಾವುಗಳ ತಲಾ ಎರಡು (ಒಂದು ಗಂಡು– ಒಂದು ಹೆಣ್ಣು) ತಳಿಗಳು ಬರಲಿವೆ. ಅದರಲ್ಲೂ ಉದ್ದನೆಯ ಕಾಳಿಂಗ ಸರ್ಪ ಹಾಗೂ ದೈತ್ಯದೇಹಿ ಹೆಬ್ಬಾವುಗಳು ಆಕರ್ಷಣೆಯ ಕೇಂದ್ರವಾಗಲಿವೆ. ಇವುಗಳೊಂದಿಗೆ ಸರಿಸೃಪ ಜಾತಿಯ ಇತರೇ ಪ್ರಾಣಿಗಳೂ ಇರಲಿವೆ ಎಂದು ಮೃಗಾಲಯದ ಆರ್‌ಎಫ್‌ಒ ಕೆ.ಪವನ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಸದ್ಯಕ್ಕೆ ವೈವಿಧ್ಯಮಯ ಹಕ್ಕಿಗಳ ಕಲರವ ಇಲ್ಲಿದೆ. ಅದರೊಂದಿಗೆ ಹೆಚ್ಚುವರಿಯಾಗಿ ಪ್ರೇಮ ಪಕ್ಷಿಗಳು (ಲವ್ ಬರ್ಡ್ಸ್), ಕಾಕ್ಟೇಲ್‌ಗಳು, ಸ್ಯಾನ್ ಕ್ವಾನಿಯರ್, ಬರ್ಡ್ ರಿಜರ್, ಜಿಬ್ರಾ ಪಿಂಚ್, ರೋಜ್ ರಿಂಗ್ ಪ್ಯಾರಾಕೇಟ್ ಮುಂತಾದ ಜಾತಿಯ ಪಕ್ಷಿಗಳೂ ನಿಮ್ಮನ್ನು ಕೂಗಿ ಕರೆಯಲಿವೆ. ಪುಟಾಣಿ ಮಕ್ಕಳನ್ನು ಅತ್ಯಂತ ಹೆಚ್ಚು ಆಕರ್ಷಿಸುವಂಥ ಮೈಮಾಟ, ಸುಂದರ ಬಣ್ಣದ ಈ ಹಕ್ಕಿಗಳು ಇನ್ನೆರಡು ತಿಂಗಳಿಗೆ ವಿಶೇಷ ಆತಿಥ್ಯ ಸ್ವೀಕರಿಸಲಿವೆ.
1200 ಮೀಟರ್ ಚಚ್ಚೌಕದಲ್ಲಿ ಹೊಸದಾಗಿ ಮೊಸಳೆ ಅಂಗಳ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮೊಸಳೆ ಹೊಂಡವಿದ್ದು, ಅದರಲ್ಲಿ ಮಗ್ಗರ್ ಮೊಸಳೆ ಇದೆ. ಹೊಸದಾಗಿ ಗರಿಯಾಲ ಪ್ರಭೇದದ ಎರಡು ಮೊಸಳೆಗಳನ್ನು ತರಿಸಲಾಗುತ್ತಿದೆ.
ಇನ್ನೊಂದೆಡೆ, ‘ಕೊಂಡಕುರಿ ಆವರಣ’ ಎಂಬ ಹೊಸ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ವಿಶಾಲವಾದ ಈ ಜಾಗದಲ್ಲಿ ದೇಶದ ವಿವಿಧೆಡೆಯ ವಿಶಿಷ್ಟ ಕುರಿಗಳ ದರ್ಶನ ಸಿಗಲಿದೆ.
ಸದ್ಯದ ಅರ್ಧ ಕಾಮಗಾರಿಗಳಿಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅನುದಾನ ಮಂಜೂರು ಮಾಡಿದೆ. ಆಡಿಟೋರಿಯಂ ಹಾಗೂ ಮ್ಯೂಸಿಯಂ ಸಲುವಾಗಿ ಲೋಕೋಪಯೋಗಿ ಇಲಾಖೆ ಅನುದಾನ ಒದಗಿಸಿದೆ ಎಂದು ಪವನ್ ತಿಳಿಸಿದರು.
ಚನ್ನಮ್ಮಾಜಿ ಐಕಾನ್ ಟವರ್
ಮೃಗಾಲಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದರೂ ಹತ್ತಿರ ಬರುವವರೆಗೂ ಕಾಣಿಸುವುದಿಲ್ಲ. ಈ ಕೊರತೆ ನೀಗಿಸುವ ಸಲುವಾಗಿ ಅರಣ್ಯಾಧಿಕಾರಿಗಳು ಉಪಾಯ ಮಾಡಿದ್ದಾರೆ. ಹೆದ್ದಾರಿ ಪಕ್ಕದಲ್ಲೇ 65 ಅಡಿ ಎತ್ತರದ ಬೃಹತ್ ‘ಚನ್ನಮ್ಮಾಜಿ ಐಕಾನ್ ಟವರ್’ ನಿರ್ಮಿಸಿದ್ದಾರೆ. ಈ ಗೋಪುರದ ಮೇಲೆ ರಾಣಿ ಚನ್ನಮ್ಮಾಜಿಯ ಪ್ರತಿಮೆ ಇರಲಿದೆ. ಮೃಗಾಲಯದ ಲೋಗೊ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಕೂಡ ಇರಲಿದೆ. ಸುಮಾರು 1 ಕಿ.ಮೀ ದೂರದಿಂದಲೇ ಮೃಗಾಲಯದ ಗುರುತು ಪತ್ತೆ ಆಗುವ ರೀತಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಕಿರು ಮೃಗಾಲಯವನ್ನು ಮಧ್ಯಮ ಮೃಗಾಲಯ ಮಾಡಲು ಕೇಂದ್ರೀಯ ಮೃಗಾಲಯ ಪ್ರಾಧಿಕಾರಕ್ಕೆ ತಿದ್ದುಪಡಿ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ-ಕೆ.ಪವನ್, ಆರ್‌ಎಫ್‌ಒ ರಾಣಿ ಚನ್ನಮ್ಮ ಕಿರು ಮೃಗಾಲಯ
ಚನ್ನಮ್ಮಾಜಿ ಐಕಾನ್ ಟವರ್ ನಿರ್ಮಾಣದ ಹಣ ಅಂಕಿ ಅಂಶ
ರಾಣಿ ಚನ್ನಮ್ಮ ಕಿರು ಮೃಗಾಲಯ ₹1.40 ಕೋಟಿ
ಸರಿಸೃಪಗಳ ಪಾರ್ಕ್ ನಿರ್ಮಾಣಕ್ಕೆ ₹45 ಲಕ್ಷ
ಗರಿಯಾಲ ಮೊಸಳೆಗಳ ಆವರಣಕ್ಕಾಗಿ ₹40 ಲಕ್ಷ
ಕೊಂಡಕುರಿ ಆವರಣ ನಿರ್ಮಾಣದ ವೆಚ್ಚ ₹24 ಲಕ್ಷ
ಹೊಸದಾಗಿ ಆರು ಪ್ರಭೇದದ ಹಕ್ಕಿಗಳ ಜಾಳಿಗೆ ನಿರ್ಮಾಣ ₹12 ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.