ADVERTISEMENT

ಕೋವಿಡ್ ಪರೀಕ್ಷೆ: ಹೊರಗಿನಿಂದ ಬಂದವರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 12:36 IST
Last Updated 29 ನವೆಂಬರ್ 2021, 12:36 IST

ಬೆಳಗಾವಿ: ‘ನಗರ ಹಾಗೂ ಜಿಲ್ಲೆಗೆ ಹೊರಗಿನಿಂದ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಮುಂಜಾಗ್ರತೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್‌ಕುಮಾರ್‌ ಕೋರಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘2 ಡೋಸ್ ಕೋವಿಡ್ ಲಸಿಕೆ ಹಾಕಿಸಿದ್ದರೂ ಮತ್ತೆ ಸೋಂಕು ಬರುವುದಿಲ್ಲ ಎಂದೇನಿಲ್ಲ. ಬರಬಹುದು. ಆದರೆ, ಪರಿಸ್ಥಿತಿ ಗಂಭೀರವಾಗಿ ಇರುವುದಿಲ್ಲ; ಜ್ವರ ಬರಬಹುದು. ಆದರೆ, ಆಮ್ಲಜನಕ ಪ್ರಮಾಣ ಕಡಿಮೆ ಆಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ’ ಎಂದರು.

‘ಹೊರ ಜಿಲ್ಲೆಗಳಿಂದ ಬಂದವರು, ಮದುವೆ ಸೇರಿ ಇನ್ನಿತರ ಕಾರ್ಯಕ್ರಮಗಳಿಗೆ ಹೋಗಿ ವಾಪಸಾದವರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ, ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಉಚಿತವಾಗಿ ಪರೀಕ್ಷೆ ನಡೆಸುತ್ತಿದ್ದೇವೆ. ನಿತ್ಯ 3ರಿಂದ 4ಸಾವಿರ ‍ಪರೀಕ್ಷೆ ಮಾಡಿಸುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಕೊರೊನಾ ರೂಪಾಂತರ ತಳಿ ಓಮೈಕ್ರಾನ್‌ಗೆ ಸಂಬಂಧಿಸಿದಂತೆ ಯಾವುದೇ ಮಾದರಿಯನ್ನೂ ನಾವು ಕಳುಹಿಸಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ, ಹೊರ ದೇಶಗಳಿಂದ ಬರುವವರಿಗೆ ಕೋವಿಡ್ ಪಾಸಿಟಿವ್ ವರದಿಯಾದರೆ ಅಂಥವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್‌ ಪ್ರಯೋಗಾಲಯಕ್ಕೆ ಕಳುಹಿಸುವಂತೆ ತಿಳಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲೆಯ ಶೇ.95ರಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಮತ್ತು ಶೇ.88ರಷ್ಟು ಮಂದಿ 2ನೇ ಡೋಸ್ ಪಡೆದಿದ್ದಾರೆ. ಸೆ.17ರಂದು ಜಿಲ್ಲೆಯಲ್ಲಿ ಒಂದೇ ದಿನ 3 ಲಕ್ಷ ಲಸಿಕೆ ನೀಡಲಾಗಿತ್ತು. ಅಂತೆಯೇ ಮುಂದಿನ ತಿಂಗಳು ಮತ್ತೆ ಒಂದೇ ದಿನ 3 ಲಕ್ಷ ಲಸಿಕೆ ಕೊಡುವ ಗುರಿ ಇದೆ’ ಎಂದು ಮಾಹಿತಿ ನೀಡಿದರು.

‘ವಿಧಾನಮಂಡಲ ಚಳಿಗಾಲ ಅಧಿವೇಶನ ಸಿದ್ಧತೆ ಸಂಬಂಧ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಡಿ.2ರಂದು ಬರಲಿದ್ದಾರೆ. ಮಾರ್ಗಸೂಚಿಗಳ ಕುರಿತು ಅವರೊಂದಿಗೆ ಚರ್ಚಿಸಲಾಗುವುದು. ಸ್ಯಾನಿಟೈಸರ್, ಮಾಸ್ಕ್‌ ಸಂಗ್ರಹ ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.