ADVERTISEMENT

ಯಾರಿಗೂ ಮೀಸಲಾತಿ ಸಿಗದಂತೆ ಮಾಡುವುದೇ ಸರ್ಕಾರದ ತಂತ್ರ: ಡಿಕೆ ಶಿವಕುಮಾರ್‌

ಮೀಸಲಾತಿ ಹೆಸರಿನಲ್ಲಿ ಸರ್ಕಾರ ಗೊಂದಲ ಸೃಷ್ಟಿಸಿದೆ ಎಂದ ಕಾಂಗ್ರೆಸ್‌ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 10:33 IST
Last Updated 30 ಡಿಸೆಂಬರ್ 2022, 10:33 IST
ಡಿಕೆ ಶಿವಕುಮಾರ್‌ (ಪ್ರಜಾವಾಣಿ ಚಿತ್ರ)
ಡಿಕೆ ಶಿವಕುಮಾರ್‌ (ಪ್ರಜಾವಾಣಿ ಚಿತ್ರ)   

ಬೆಳಗಾವಿ: ‘ಯಾವ ಸಮುದಾಯದವರಿಗೂ ಮೀಸಲಾತಿ ಸಿಗಬಾರದು ಎಂಬುದೇ ರಾಜ್ಯ ಸರ್ಕಾರದ ಉದ್ದೇಶ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಯಾರಿಗೂ ಮೀಸಲಾತಿ ಸಿಗಬಾರದು, ಎಲ್ಲರೂ ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡುವಂತಾಗಬೇಕು ಎಂಬುದೇ ಅವರ ತಂತ್ರವಾಗಿದೆ’ ಎಂದು ಅವರು ಹೇಳಿದರು.

‘ಮೀಸಲಾತಿ ಹೆಸರಿನಲ್ಲಿ ಸರ್ಕಾರ ಗೊಂದಲ ಸೃಷ್ಟಿಸಿದ್ದು, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಈ ತೀರ್ಮಾನದಿಂದ ಎಲ್ಲ ಸಮುದಾಯದವರಿಗೂ ಅನ್ಯಾಯವಾಗಿದೆ. ಈ ರೀತಿ ಮೀಸಲಾತಿ ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮದವರಿಗೆ ಅವರು ಪ್ರತಿಕ್ರಿಯಿಸಿದರು.

ADVERTISEMENT

‘ಯಾವ ಸಮುದಾಯ ಎಷ್ಟು ಮೀಸಲಾತಿ ಕೇಳುವುದೋ ಅದನ್ನು ನೇರವಾಗಿ ಕೊಡಬೇಕು. ಸಚಿವ ಸಂಪುಟ ಸಭೆ ಮುಗಿದ ನಂತರ ಮುಖ್ಯಮಂತ್ರಿ ನೇರವಾಗಿ, ಯಾರಿಗೆ ಏನೇನು ಕೊಟ್ಟಿದ್ದೇವೆ ಎಂದು ಹೇಳಬೇಕಿತ್ತು. ಆದರೆ, ತಾವೂ ಮೌನವಾಗಿದ್ದು ಎಲ್ಲರನ್ನೂ ಗೊಂದಲದಲ್ಲಿ ಇರಿಸಿದ್ದಾರೆ. ಯಾರಿಗೆ ನ್ಯಾಯ ನೀಡಿದ್ದೇವೆ ಎಂದು ಹೇಳಲು ಬಿಜೆಪಿ ಮುಖಂಡರು ಮಾತ್ರವಲ್ಲ; ಮುಖ್ಯಮಂತ್ರಿ ಅವರಿಗೂ ಧೈರ್ಯ ಇಲ್ಲ’ ಎಂದು ಟೀಕಿಸಿದರು.

ಸರ್ವಪಕ್ಷ ಸಭೆ ಕರೆಯದ್ದೇ ಒಳ್ಳೆಯದಾಯಿತು

ಮೀಸಲಾತಿ ಘೋಷಣೆ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯದ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಸರ್ವಪಕ್ಷ ಸಭೆ ಕರೆಯದಿರುವುದೆ ಒಳ್ಳೆಯದಾಯಿತು. ಅವರಿಗೆ ಯಾರ ಬಗ್ಗೆಯೂ ನಂಬಿಕೆ ಇಲ್ಲ. ಹೀಗಾಗಿ, ಸಭೆಗೆ ಹೋಗಿ ಅವರು ಹೇಳಿದ್ದನ್ನೇ ಕೇಳಿ ಬರುವುದು ತಪ್ಪಿತು’ ಎಂದರು.

‘ಜನವರಿ 11ರಿಂದ ಕಾಂಗ್ರೆಸ್‌ ‘ಪಾಂಚಜನ್ಯ ಯಾತ್ರೆ’ ಬೆಳಗಾವಿಯ ವೀರಸೌಧದಿಂದ ಆರಂಭವಾಗಲಿದೆ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣೆ ಸಮೀಪಿಸಿದಾಗ ಬರುತ್ತಾರೆ. ಚುನಾವಣೆ ಮುಗಿಯುತ್ತಲೇ ಹೋಗುತ್ತಾರೆ. ಬಂದುಹೋಗುವ ಮಧ್ಯೆ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆಯೆ?’ ಎಂದೂ ಅವರು ಪ್ರಶ್ನಿಸಿದರು.

‘ಈ ಬಾರಿ ವಿಧಾನಮಂಡಲ ಚಳಿಗಾಲದ ಅಧಿವೇಶನದಿಂದ ಏನೂ ಉಪಯೋಗವಾಗಿಲ್ಲ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು, ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಲಿಲ್ಲ. ಬರೀ ಕಾಲಹರಣ ಮಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಮನ್ವಯ ಸಭೆ ನಡೆಸಿದರು. ಆದರೆ, ಮಹಾರಾಷ್ಟ್ರದವರು ಕರ್ನಾಟಕದ ಹಳ್ಳಿಗಳು ತಮಗೆ ಬೇಕೆಂದು ವಿಧಾನಸಭೆಯಲ್ಲಿ ಏಕೆ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಬಿಜೆಪಿಯವರು ಕೇವಲ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆಪಾದಿಸಿದರು.

ಕಾಂಗ್ರೆಸ್ ಮುಖಂಡ ಫಿರೋಜ್ ಸೇಠ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.