ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಲಪ್ರಭಾ ಹಾಗೂ ಘಟಪ್ರಭಾ ನದಿ ಪಾತ್ರದಲ್ಲಿ ಒಟ್ಟು 777 ಎಕರೆ ವಿಸ್ತೀರ್ಣದ ಭೂಮಿ ಒತ್ತುವರಿಯಾಗಿದೆ.
ಇದನ್ನು ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಮೂರು ವರ್ಷಗಳ ಹಿಂದೆ ವರದಿ ಸಲ್ಲಿಕೆ ಆಗಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲ. ಪರಿಣಾಮವಾಗಿ ಈ ಮೂರು ಜಿಲ್ಲೆಗಳಲ್ಲಿ ಪ್ರತಿ ವರ್ಷವೂ ಪ್ರವಾಹ ಸ್ಥಿತಿ ಉಂಟಾಗುತ್ತದೆ.
2019ರಲ್ಲಿ ಭೀಕರ ಪ್ರವಾಹ ಉಂಟಾದಾಗ ಆಯಾ ನದಿಗಳ ಪಾತ್ರದಲ್ಲಿ ಆಗಿರುವ ಒತ್ತುವರಿಯೇ ಕಾರಣ ಎಂಬ ಮಾತು ಕೇಳಿ ಬಂದಿತ್ತು. ಭೂ ದಾಖಲೆಗಳ ಇಲಾಖೆ 2021–22ನೇ ಸಾಲಿನಲ್ಲಿ ಸಮೀಕ್ಷೆ ನಡೆಸಿ, 2022ರ ಸೆಪ್ಟೆಂಬರ್ 8ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿಯನ್ನು ಸಲ್ಲಿಸಿತ್ತು.
ಒತ್ತುವರಿ ತೆರವು ಜೊತೆಗೆ, ಆ ಜಾಗದ ಸಂರಕ್ಷಣೆಗೆ ತಡೆಗೋಡೆ ನಿರ್ಮಾಣ, ಸಸಿಗಳನ್ನು ನೆಡುವುದು, ಕಲ್ಲುಗಳನ್ನು ಇರಿಸುವುದು, ಟ್ರೆಂಚಿಂಗ್ ಮತ್ತಿತರ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ₹2.59 ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಈ ಪೈಕಿ ₹55.87 ಲಕ್ಷ ಖರ್ಚು ಆಗಿದೆ.
ಉಳಿದ ಮೊತ್ತದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಖಾತೆಗೆ ₹1 ಕೋಟಿ, ಬೆಳಗಾವಿ ಜಿಲ್ಲಾಧಿಕಾರಿಗೆ ₹63.59 ಲಕ್ಷ, ಗದಗ ಜಿಲ್ಲಾಧಿಕಾರಿಗೆ ₹40 ಲಕ್ಷ ಕೊಡಲಾಗಿದೆ. ಹಾಗಿದ್ದರೂ ಒತ್ತುವರಿ ಸಮಸ್ಯೆ ಬಗೆಹರಿದಿಲ್ಲ.
ಎಲ್ಲೆಲ್ಲಿ ಎಷ್ಟು ಒತ್ತುವರಿ?: ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಒಟ್ಟು 4,593 ಸರ್ವೆ ಸಂಖ್ಯೆಗಳ ಅಳತೆಯಾಗಿದ್ದು, 659 ಸರ್ವೆ ಸಂಖ್ಯೆಗಳಲ್ಲಿ ಅತಿಕ್ರಮಣವಾಗಿದೆ.
ಮಲಪ್ರಭಾ ನದಿಪಾತ್ರದಲ್ಲಿ 609 ಎಕರೆ ಮತ್ತು ಘಟಪ್ರಭಾ ನದಿಪಾತ್ರದಲ್ಲಿ 168 ಎಕರೆ ಒತ್ತುವರಿ ಆಗಿರುವುದು ಕಂಡು ಬಂದಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಎರಡೂ ನದಿಗಳ ಪಾತ್ರದಲ್ಲಿ 208 ಎಕರೆ ಭೂಮಿ ಒತ್ತುವರಿಯಾಗಿದೆ. ಹಲವೆಡೆ ರೈತರೇ ನದಿಪಾತ್ರ ಒತ್ತುವರಿ ಮಾಡಿ, ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.
ನದಿ ಹರಿವಿನ ದಿಕ್ಕೇ ಬದಲು: ಒತ್ತುವರಿ ಪರಿಣಾಮ, ಎರಡೂ ನದಿಗಳ ಹರಿಯುವ ಮಾರ್ಗಗಳೇ ಬದಲಾಗಿವೆ. ಅಕ್ಕಪಕ್ಕದ ಹೊಲಗಳು ಮತ್ತು ಗ್ರಾಮಗಳಿಗೆ ಅಪಾರ ನೀರು ನುಗ್ಗಿ ಹಾನಿಯಾಗುತ್ತಿದೆ.
ನದಿಗಳ ಹರಿವಿನ ಮಾರ್ಗ ಬದಲಾದ ಕಾರಣ, 1 ಸಾವಿರ ರೈತರಿಗೆ ಸೇರಿದ 1,363 ಎಕರೆ ಜಮೀನು ವ್ಯಾಪ್ತಿಯಲ್ಲಿ ಎರಡೂ ನದಿಗಳು ಹರಿಯುತ್ತಿವೆ. ಕೆಲವೆಡೆ ನದಿಪಾತ್ರ ಹಳ್ಳದಂತೆ ಗೋಚರಿಸುತ್ತಿದೆ.
–––––
ಮಲಪ್ರಭಾ ಘಟಪ್ರಭಾ ನದಿ ಪಾತ್ರ ಭೂಮಿ ಒತ್ತುವರಿ ತೆರವಿಗೆ ಅಧಿಕಾರಿಗಳ ಸಭೆ ನಡೆಸಲಿದ್ದು ಸಂರಕ್ಷಣೆಗೆ ಕ್ರಮ ವಹಿಸುವೆ
–ಜಾನಕಿ ಕೆ.ಎಂ. ಪ್ರಾದೇಶಿಕ ಆಯುಕ್ತೆ ಬೆಳಗಾವಿ
ಮಳೆಗಾಲ ಮುಗಿದ ತಕ್ಷಣವೇ ಒತ್ತುವರಿ ತೆರವಿಗೆ ಕ್ರಮ ವಹಿಸಲಾಗುವುದು. ಅಗತ್ಯ ಮಾಹಿತಿ ಪಡೆಯಲಾಗುವುದು
–ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ ಬೆಳಗಾವಿ
ಪ್ರತಿ ಮಳೆಗಾಲದಲ್ಲಿ ನಮ್ಮೂರಿಗೆ ಮತ್ತು ಜಮೀನಿಗೆ ಘಟಪ್ರಭಾ ನದಿ ನೀರು ನುಗ್ಗಿ ಹಾನಿಯಾಗುತ್ತಿದೆ. ಇದನ್ನು ತಡೆಯಲು ಒತ್ತುವರಿ ತೆರವುಗೊಳಿಸಬೇಕು
–ಜಂಬು ಚಿಕ್ಕೋಡಿ ಗ್ರಾಮಸ್ಥ ಹುಣಶ್ಯಾಳ ಪಿ.ವೈ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.