ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಬಿಡುಗಡೆಯಾಗಿದ್ದು ಕೇವಲ ₹ 230 ಕೋಟಿ!

ಆರ್‌ಟಿಐದಿಂದ ಮಾಹಿತಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 12:26 IST
Last Updated 31 ಜುಲೈ 2020, 12:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಕೋವಿಡ್‌ ರೋಗವನ್ನು ನಿಯಂತ್ರಿಸಲು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸರ್ಕಾರ ಇದುವರೆಗೆ ಒಟ್ಟು ₹ 230.73 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗೆ ₹ 13.97 ಕೋಟಿ ದೊರೆತಿದೆ.

ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ) ಸುರೇಂದ್ರ ಉಗಾರೆ ಅವರು ಮಾಹಿತಿ ಹಕ್ಕಿನಡಿ ಪಡೆದುಕೊಂಡ ಮಾಹಿತಿಯಿಂದ ಇದು ಬೆಳಕಿಗೆ ಬಂದಿದೆ.

‘ರಾಜ್ಯ ಸರ್ಕಾರ ಹೇಳುವಂತೆ ₹ 2,000 ಕೋಟಿ ಬಿಡುಗಡೆಯಾಗಿಲ್ಲ. ಇದಲ್ಲದೇ, ವಿರೋಧ ಪಕ್ಷದವರು ಹೇಳುವಂತೆ ಸಾವಿರಾರು ಕೋಟಿ ರೂಪಾಯಿಯ ಅವ್ಯವಹಾರವೂ ನಡೆದಿಲ್ಲ’ ಎಂದು ಅವರು ಹೇಳಿದರು.

ADVERTISEMENT

3 ಹಂತಗಳಲ್ಲಿ ಹಣ:ಮಾರ್ಚ್‌ ತಿಂಗಳಲ್ಲಿ ಕೋವಿಡ್‌ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿದ್ದವು. ತಿಂಗಳ ಅಂತ್ಯದ ವೇಳೆಗೆ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಸೋಂಕು ಕಂಡುಬಂದವರಿಗೆ ಚಿಕಿತ್ಸೆ ನೀಡುವುದು, 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡುವುದು ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಎಲ್ಲ ಜಿಲ್ಲಾಡಳಿತಕ್ಕೆ ಅನುದಾನ ಒದಗಿಸಲಾಗಿತ್ತು.

ಮೂರು ಹಂತಗಳಲ್ಲಿ ಹಣ ಒದಗಿಸಲಾಗಿದೆ. ಮೊದಲ ಹಂತ ಮಾರ್ಚ್‌ ತಿಂಗಳಲ್ಲಿ ₹ 66.85 ಕೋಟಿ, ಎರಡನೇ ಹಂತ ಮೇ ತಿಂಗಳಿನಲ್ಲಿ ₹ 84.25 ಕೋಟಿ ಹಾಗೂ ಮೂರನೇ ಹಂತ ಜೂನ್‌ ತಿಂಗಳಿನಲ್ಲಿ ₹ 79.63 ಕೋಟಿ ಒದಗಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಅನುಕ್ರಮವಾಗಿ ₹ 40 ಲಕ್ಷ, ₹ 4.37 ಕೋಟಿ ಹಾಗೂ ₹ 9.20 ಕೋಟಿ ಸೇರಿದಂತೆ ಒಟ್ಟು ₹ 13.97 ಕೋಟಿ ದೊರೆತಿದೆ.

ಮಾರ್ಚ್‌ ತಿಂಗಳಿನಲ್ಲಿ ಸೋಂಕಿತರ ಕ್ವಾರಂಟೈನ್‌, ಗಂಟಲು ದ್ರವ, ರಕ್ತ ಮಾದರಿಯ ಸಂಗ್ರಹ, ಪರೀಕ್ಷೆಗಾಗಿ ₹ 14.50 ಲಕ್ಷ , ವೈದ್ಯಕೀಯ ಉಪಕರಣಗಳ ಖರೀದಿಗಾಗಿ ₹ 26 ಲಕ್ಷ ಸೇರಿದಂತೆ ಒಟ್ಟು ₹ 40.50 ಲಕ್ಷ ಹಣವನ್ನು ಬೆಳಗಾವಿಗೆ ಬಿಡುಗಡೆಯಾಗಿತ್ತು.

ಮೇ ತಿಂಗಳಿನಲ್ಲಿ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು, ಆಹಾರ ಹಾಗೂ ಬಟ್ಟೆ ನೀಡಲು ₹ 3.62 ಕೋಟಿ, ಸೋಂಕಿತರ ಕ್ವಾರಂಟೈನ್‌, ಗಂಟಲು ದ್ರವ, ರಕ್ತ ಮಾದರಿಯ ಸಂಗ್ರಹ, ಪರೀಕ್ಷೆಗಾಗಿ ₹ 50 ಲಕ್ಷ, ಪ್ರಯೋಗಾಲಯದ ಉಪಕರಣ ಖರೀದಿಗಾಗಿ ₹ 25 ಲಕ್ಷ ಸೇರಿದಂತೆ ಒಟ್ಟು ₹ 4.37 ಕೋಟಿ ಅನುದಾನ ದೊರೆತಿದೆ.

ಜೂನ್‌ ತಿಂಗಳಿನಲ್ಲಿ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು, ಆಹಾರ– ಬಟ್ಟೆ ಪೂರೈಸಲು ₹ 6.70 ಕೋಟಿ, ಸೋಂಕಿತರ ಕ್ವಾರಂಟೈನ್‌ ಮಾಡಲು, ಗಂಟಲು ದ್ರವ, ರಕ್ತ ಮಾದರಿ ಸಂಗ್ರಹಿಸಲು ₹ 2.50 ಕೋಟಿ ಸೇರಿದಂತೆ ಒಟ್ಟು ₹ 9.20 ಕೋಟಿ ಹಣ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.