ADVERTISEMENT

‘ಮಾಧ್ಯಮ ಕ್ಷೇತ್ರಕ್ಕೆ ನೀತಿ- ನಿಯಮ ಅಗತ್ಯ’

​ಪ್ರಜಾವಾಣಿ ವಾರ್ತೆ
Published 18 ಮೇ 2022, 9:45 IST
Last Updated 18 ಮೇ 2022, 9:45 IST
ಬೆಳಗಾವಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಶ್ರೀನಿಧಿ ಮಾತನಾಡಿದರು.
ಬೆಳಗಾವಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಶ್ರೀನಿಧಿ ಮಾತನಾಡಿದರು.   

ಬೆಳಗಾವಿ: ‘ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲಾಗುವ ಮಾಧ್ಯಮ ಕ್ಷೇತ್ರಕ್ಕೆ ನೀತಿ–ನಿಯಮಗಳು ಮತ್ತು ಮಾರ್ಗದರ್ಶಿಸೂತ್ರಗಳು ಅಗತ್ಯವಾಗಿವೆ’ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಶ್ರೀನಿಧಿ ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಇಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಾಧ್ಯಮದವರಿಗೆ ಬುಧವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾಧ್ಯಮ ಕ್ಷೇತ್ರವು ಸ್ವಯಂ ರೂಪಿಸಿಕೊಳ್ಳಲಿಲ್ಲ. ಅಲ್ಲಿ ಯಾವುದೇ ರೀತಿಯ ನಿಯಂತ್ರಣ ಇಲ್ಲದಂತಾಯಿತು. ಕೆಲವು ವಾಹಿನಿಗಳ ಕಾರ್ಯಕ್ರಮಗಳ ನಿರೂಪಕರು ವಿಷಯದ ಬಗ್ಗೆ ಚರ್ಚೆಗಿಂತಲೂ ಜಗಳವಾಡಿಸುವ ಕೆಲಸ ಮಾಡಿಸುವುದು ಕಂಡುಬರುತ್ತದೆ. ಸುಳ್ಳು ಸುದ್ದಿಗಳ ಹರಡುವಿಕೆ ಸಾಮಾಜಿಕ ಜಾಲತಾಣಗಳಿಂದ ಹೆಚ್ಚುತ್ತಿದೆ. ಕೆಲವು ಬಾರಿ ತಪ್ಪು ಸಂದೇಶಗಳು ಕೂಡ ಹೋಗುತ್ತಿವೆ. ಇದೆಲ್ಲದಕ್ಕೂ ಕಡಿವಾಣ ಹಾಕುವ ಅಗತ್ಯವಿದೆ’ ಎಂದು ತಿಳಿಸಿದರು.

ADVERTISEMENT

‘ಮೌಂಟ್ ಅಬು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ತನ್ನ 20 ಘಟಕಗಳ ಮೂಲಕ ಸಮಾಜದ ವಿವಿಧ ಕ್ಷೇತ್ರಗದವರಿಗೆ ಪ್ರತಿ ವರ್ಷ ಕಾರ್ಯಕ್ರಮಗಳನ್ನು ಆಯೋಜಿಸಿ ಆಧ್ಯಾತ್ಮಿಕ ಪ್ರಜ್ಞೆ ಮೂಡಿಸಿ ಪರಿವರ್ತನೆಗೆ ಶ್ರಮಿಸುತ್ತಿದೆ’ ಎಂದರು.

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ, ‘ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್‌ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಧ್ಯಮ ಕ್ಷೇತ್ರದ ಮೂಲಕ ದೇಶ ಸೇವೆ ಸಲ್ಲಿಸಿದ್ದರು. ಮಾಧ್ಯಮ ಕ್ಷೇತ್ರ ಇಂದು ಉದ್ಯಮವಾಗಿದೆ. ಲಾಭ ಮುಖ್ಯವಾಗಿದೆ; ನೀತಿ–ತತ್ವಗಳಿಗೆ 2ನೇ ಸ್ಥಾನ ದೊರೆಯುತ್ತಿದೆ’ ಎಂದು ತಿಳಿಸಿದರು.

ಪತ್ರಕರ್ತ ಶ್ರೀಕಾಂತ್ ಕಾಕತೀಕರ್, ಮರಾಠಿ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಶಹಾಪುರ, ಕಾರ್ಯಕನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಕುರಂದವಾಡೆ ಮತ್ತು ಬೆಳಗಾವಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಅಂಬಿಕಾ ಮಾತನಾಡಿದರು.

ಶ್ರೀಕಾಂತ್ ಸ್ವಾಗತಿಸಿದರು. ವಿದ್ಯಾ ನಿರೂಪಿಸಿದರು. ಮನೋಹರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.