ADVERTISEMENT

ಮರಳುವ ಭರವಸೆಯೇ ಇರಲಿಲ್ಲ: ಉಕ್ರೇನ್‌ನಿಂದ ಮರಳಿದ ರಾಮದುರ್ಗ ವೈದ್ಯ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 15:28 IST
Last Updated 9 ಮಾರ್ಚ್ 2022, 15:28 IST
ಯುದ್ಧಪೀಡಿತ ಉಕ್ರೇನ್‌ನಿಂದ ಮರಳಿದ ರಾಮದುರ್ಗ ತಾಲ್ಲೂಕಿನ ಕನ್ನಾಳದ ವೈದ್ಯ ವಿದ್ಯಾರ್ಥಿನಿ ಲಕ್ಷ್ಮಿ ಮಳಲಿ ಅವರನ್ನು ಯರಗಟ್ಟಿಯ ಪ್ರವಾಸಿಮಂದಿರದಲ್ಲಿ ಮುಖಂಡರು ಮತ್ತು ಕುಟುಂಬದವರು ಬರಮಾಡಿಕೊಂಡರು
ಯುದ್ಧಪೀಡಿತ ಉಕ್ರೇನ್‌ನಿಂದ ಮರಳಿದ ರಾಮದುರ್ಗ ತಾಲ್ಲೂಕಿನ ಕನ್ನಾಳದ ವೈದ್ಯ ವಿದ್ಯಾರ್ಥಿನಿ ಲಕ್ಷ್ಮಿ ಮಳಲಿ ಅವರನ್ನು ಯರಗಟ್ಟಿಯ ಪ್ರವಾಸಿಮಂದಿರದಲ್ಲಿ ಮುಖಂಡರು ಮತ್ತು ಕುಟುಂಬದವರು ಬರಮಾಡಿಕೊಂಡರು   

ಯರಗಟ್ಟಿ: ಯುದ್ಧಪೀಡಿತ ಉಕ್ರೇನ್‌ನಿಂದ ಮರಳಿದ ರಾಮದುರ್ಗ ತಾಲ್ಲೂಕಿನ ಕನ್ನಾಳದ ವೈದ್ಯ ವಿದ್ಯಾರ್ಥಿನಿ ಲಕ್ಷ್ಮಿ ಮಳಲಿ ಅವರನ್ನು ಇಲ್ಲಿನ ಪ್ರವಾಸಿಮಂದಿರದಲ್ಲಿ ಬರಮಾಡಿಕೊಳ್ಳಲಾಯಿತು.

ರಾಮದುರ್ಗ ಮತ್ತು ಯರಗಟ್ಟಿ ಮುಖಂಡರು ಹಾಗೂ ಕುಟುಂಬದವರು, ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ರತ್ನಾ ಯಾದವಾಡ, ಮುಖಂಡರಾದ ಅಜಿತಕುಮಾರ ದೇಸಾಯಿ, ಮಹಾಂತೇಶ ಜಕಾತಿ, ಚಂದ್ರಶೇಖರ ಹಾದಿಮನಿ, ಚೇತನ ಜಕಾತಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಲಕ್ಷ್ಮಿ, ‘ರೈತನ ಮಗಳಾದರೂ ವೈದ್ಯಕೀಯ ಶಿಕ್ಷಣದ ಹಂಬಲದಿಂದ ಉಕ್ರೇನ್‌ಗೆ ಹೋಗಿದ್ದೆ. ರಷ್ಯಾ ದಾಳಿಯಿಂದ ಹೊತ್ತಿ ಉರಿಯುತ್ತಿದ್ದ ಅಲ್ಲಿಂದ ಮರಳುವ ಭರವಸೆಯೇ ಇರಲಿಲ್ಲ. ಆತಂಕದಲ್ಲಿದ್ದ ನಮ್ಮನ್ನು ಸುರಕ್ಷಿತವಾಗಿ ದೇಶಕ್ಕೆ ಕರೆ ತಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಚಿರಋಣಿಯಾಗಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಅಲ್ಲಿಗ ಹೋಗಿ 8 ದಿನಗಳಷ್ಟೆ ಆಗಿತ್ತು. ಅಷ್ಟರಲ್ಲಿ ಯುದ್ಧ ಪ್ರಾರಂಭವಾಯಿತು. ಇದರಿಂದ ದಿಕ್ಕೆ ತೋಚದಂತಾಗಿತ್ತು. ಸರಿಯಾಗಿ ಆಹಾರ ಮತ್ತು ನೀರು ಸಿಗದಿರುವುದು ಒಂದೆಡೆಯಾದರೆ ಬಾಂಬ್‌ ದಾಳಿಯ ಭಯದಿಂದ ನಿದ್ರಿಸಲಾಗಿರಲಿಲ್ಲ’ ಎಂದು ಅನುಭವ ಹಂಚಿಕೊಂಡರು.

‘ನನ್ನನ್ನು ಸಾಕಿ ಸಲುಹಿದ ಚಿಕ್ಕಪ್ಪ ನನ್ನನ್ನು ಉಕ್ರೇನ್‌ಗೆ ಕಳುಹಿಸಲು ಬಸ್ ಹತ್ತಿಸುವ ವೇಳೆಯೇ ಹೃದಯಾಘಾತದಿಂದ ಸಾವಿಗೀಡಾಗಿದ್ದರಿಂದ ಇಡೀ ಕುಟುಂಬ ದುಃಖದಲ್ಲಿತ್ತು. ಹೀಗಿರುವಾಗ ನನಗೂ ತೊಂದರೆ ಆಗಿದೆ ಎನ್ನುವುದನ್ನು ಹೇಳಿದರೆ ಮತ್ತಷ್ಟು ದುಃಖಿತರಾಗುತ್ತಾರೆ ಎಂದು ನನಗಾಗುತ್ತಿದ್ದ ತೊಂದರೆಯನ್ನು ತಿಳಿಸಿರಲಿಲ್ಲ. ಚೆನ್ನಾಗಿದ್ದೇನೆ ಎಂದು ಹೇಳಿದ್ದೆ’ ಎಂದರು.

ಸಿದ್ದು ದೇವರಡ್ಡಿ, ಶಿವಾನಂದ ಪಟ್ಟಣಶೆಟ್ಟಿ, ಎಂ.ಎಸ್. ದಂಡಿನದುರ್ಗಿ, ಚಂದ್ರು ಮಾಳಗಿ, ಈರಣ್ಣ ಪೂಜೇರ, ಪ್ರಕಾಶ ಅಸುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.