ADVERTISEMENT

ಉಕ್ರೇನ್‌: ಭಾರತೀಯರ ರಕ್ಷಣಾ ಕಾರ್ಯಾಚರಣೆಯ ಪೈಲಟ್‌ಗಳ ತಂಡದಲ್ಲಿ ಬೆಳಗಾವಿ ಸೊಸೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 10:21 IST
Last Updated 6 ಮಾರ್ಚ್ 2022, 10:21 IST
ಪತಿ ಆದಿತ್ಯ, ತಾಯಿ ಪದ್ಮಜಾ ಅವರೊಂದಿಗೆ ದಿಶಾ
ಪತಿ ಆದಿತ್ಯ, ತಾಯಿ ಪದ್ಮಜಾ ಅವರೊಂದಿಗೆ ದಿಶಾ   

ಬೆಳಗಾವಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತರುವಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸಿದ ಪೈಲಟ್‌ಗಳ ಪೈಕಿ ದಿಶಾ ಆದಿತ್ಯ ಮಣ್ಣೂರ ಎನ್ನುವವರು ಬೆಳಗಾವಿಯ ಸೊಸೆ ಎನ್ನುವ ಅಂಶ ಹೊರಬಿದ್ದಿದೆ.

ಅವರು ಪೈಲಟ್ ಕೂಡ ಆಗಿರುವ ಬೆಳಗಾವಿ ಮೂಲದ ಆದಿತ್ಯ ಅವರ ಪತ್ನಿಯಾಗಿದ್ದಾರೆ. ಸದ್ಯ ದೆಹಲಿಯಲ್ಲಿ ನೆಲೆಸಿದ್ದಾರೆ. ಏರ್‌ಇಂಡಿಯಾ ಕಂಪನಿಯ ವಿಮಾನಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದಿತ್ಯ ಇಲ್ಲಿನ ಪದ್ಮಜಾ–ಪ್ರಹ್ಲಾದ ದಂಪತಿಯ ಪುತ್ರ. ಈ ಕುಟುಂಬವೀಗ ಮಂಬೈನಲ್ಲಿ ನೆಲೆಸಿದೆ.

ಸಂಕಷ್ಟದಲ್ಲಿದ್ದ 242 ಭಾರತೀಯರನ್ನು ಕರೆತರುವುದಕ್ಕಾಗಿ ತೆರಳಿದ್ದ ‘ಎಐ–1947’ ವಿಮಾನದ ನಾಲ್ವರು ಪೈಲಟ್‌ಗಳ ಪೈಕಿ ದಿಶಾ ಒಬ್ಬರಾಗಿದ್ದರು. ಹೋದ ತಿಂಗಳು ಆ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಆತಂಕದ ಪರಿಸ್ಥಿತಿಯ ನಡುವೆಯೂ ಉಕ್ರೇನ್‌ನ ಕೀವ್‌ಗೆ ತೆರಳಿ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ತಂಡದಲ್ಲಿ ಸೊಸೆ ಕೆಲಸ ಮಾಡಿದ್ದಾರೆ ಎನ್ನವುದು ಹೆಮ್ಮೆ ಮೂಡಿಸಿದೆ. ಅಲ್ಲಿಗೆ ತೆರಳುವ ಮುನ್ಬ ಆಕೆಯೇ ನಮಗೆ ಧೈರ್ಯ ತುಂಬಿದ್ದಳು’ ಎಂದು ಅತ್ತೆ ಪದ್ಮಜಾ ಹೇಳಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಪೈಲಟ್ ತರಬೇತಿ ಪಡೆದಿರುವ ದಿಶಾ, 2017ರಿಂದ ಹಲವು ದೇಶಗಳಿಗೆ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪರ್ಕಕ್ಕೆ ಅವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.