ADVERTISEMENT

ಎಂಇಎಸ್ ಪರ ಶಿವಸೇನೆಯ ಸಂಜಯ್ ರಾವತ್ ಪ್ರಚಾರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 12:02 IST
Last Updated 12 ಏಪ್ರಿಲ್ 2021, 12:02 IST
 ಸಂಜಯ್ ರಾವತ್
ಸಂಜಯ್ ರಾವತ್   

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಹಾಗೂ ಶಿವಸೇನಾ ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶುಭಂ ಶೆಳಕೆ ಪರವಾಗಿ ಮತ ಯಾಚಿಸುವುದಕ್ಕಾಗಿ ಮಹಾರಾಷ್ಟ್ರದ ಶಿವಸೇನಾ ವಕ್ತಾರ ಸಂಜಯ್‌ ರಾವತ್‌ ಏ. 14ರಂದು ಇಲ್ಲಿಗೆ ಬರಲಿದ್ದಾರೆ.

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು, ‘ಶೆಳಕೆಗೆ ಬೆಂಬಲ ನೀಡಿ ಪ್ರಚಾರ ನಡೆಸಲಿದ್ದೇನೆ’ ಎಂದು ತಿಳಿಸಿದ್ದಾರೆ.

‘ಕರ್ನಾಟಕ–ಮಹಾರಾಷ್ಟ್ರದ ಗಡಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಂಇಸ್ ಹಾಗೂ ಶಿವಸೇನಾ ಮುಖಂಡರು ಸಭೆಯಲ್ಲಿ ನಿರ್ಧರಿಸಿದ್ದರು. ಅದರಂತೆ ಅಭ್ಯರ್ಥಿ ಕಣಕ್ಕಿಳಿಸಿವೆ. ಶಿವಸೇನಾದಿಂದ ಸ್ಪರ್ಧಿಸಿದ್ದ ಕೃಷ್ಣಾಜಿ ಪಾಟೀಲ ನಾಮಪತ್ರ ವಾಪಸ್ ಪಡೆದು ಕಣದಿಂದ ಹಿಂದಕ್ಕೆ ಸರಿದಿದ್ದರು.

ADVERTISEMENT

ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಅದರಲ್ಲೂ ಮರಾಠಿ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಶೆಳಕೆ ಪ್ರಚಾರ ನಡೆಸುತ್ತಿದ್ದಾರೆ. ಎಂಇಎಸ್ ಹಾಗೂ ಶಿವಸೇನಾ ಬೆಂಬಲಿತರ ಬೆಂಬಲ ಕೇಳುತ್ತಿದ್ದಾರೆ.

ಬಿಜೆಪಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏ.14ರಂದು ನಗರದಲ್ಲಿ ರೋಡ್ ಷೋ ನಡೆಸಲಿದ್ದಾರೆ. ಏ.15ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಪ್ರಚಾರಕ್ಕೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.