
ಸಂಕೇಶ್ವರ: ಪವನ ಕಣಗಲಿ ಫೌಂಡೇಷನ್ ವತಿಯಿಂದ ಮಕರ ಸಂಕ್ರಾಂತಿಗೆ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ 7 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಶಾಲಾ ವಿದ್ಯಾರ್ಥಿಗಳು ‘ಪತಂಗೋತ್ಸವ-2026’ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಯೋಜಕ ಪವನ ಕಣಗಲಿ ಹೇಳಿದರು.
7ನೇ ವರ್ಷದ ಪತಂಗೋತ್ಸವದ ಲೋಗೋವನ್ನು ಗಾಳಿಪಟ ತಯಾರಿಕೆಗೆ ಅಗತ್ಯವಾದ ಬಿದಿರಿನ ಕಡ್ಡಿಗಳನ್ನು ಒದಗಿಸುವ ಬಿದಿರಿನ ಕುಶಲಕರ್ಮಿಗಳು ಹಾಗೂ ಗಾಳಿಪಟ ವಿತರಕರ ಜೊತೆಗೂಡಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಜನವರಿ 14ರಂದು ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಹೊರವಲಯದ ಕೊಳಲಗುತ್ತಿ ಗುಡ್ಡದ ಮೇಲೆ ‘ಪತಂಗೋತ್ಸವ-2026’ಕ್ಕೆ ಚಾಲನೆ ಸಿಗಲಿದ್ದು, ದಿನವಿಡೀ ಕಾರ್ಯಕ್ರಮ ಜರುಗಲಿದೆ. ಗಾಳಿಪಟ ಸ್ಪರ್ಧೆಯ ಜೊತೆಗೆ ಎಲ್‌ಕೆಜಿಯಿಂದ 2ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗಾಗಿ ಚಿಣ್ಣರ ಚಿತ್ರಕಲೆ, 3 ರಿಂದ 6ನೇ ತರಗತಿಯ ಮಕ್ಕಳಿಗೆ ಚಿಣ್ಣಿದಾಂಡು, ಯಾವುದೇ ವಯೋಮಿತಿ ಮಿತಿ ಇಲ್ಲದೇ ಬುಗುರಿ ಹಾಗೂ ಹೆಣ್ಣು ಮಕ್ಕಳಿಗೆ ಲಗೋರಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ ಎಂದರು.
ಸ್ಪರ್ಧೆಗಳು ಗಾಳಿಪಟ ತಯಾರಿಕೆ ಮತ್ತು ಗಾಳಿಪಟ ಹಾರಿಸುವುದು ಎಂಬ ಎರಡು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿವೆ. ಎರಡೂ ವಿಭಾಗಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನ ₹10,000 ದ್ವಿತೀಯ ₹5,000 ಹಾಗೂ ತೃತೀಯ ₹3,000 ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಗಾಳಿಪಟ ಮತ್ತು ಇತರೆ ಸ್ಪರ್ಧೆಗಳು ಸೇರಿದಂತೆ ಪತಂಗೋತ್ಸವದ ವಿಜೇತರಿಗಾಗಿ ಫೌಂಡೇಷನ್ ಒಟ್ಟು ₹51,000 ಬಹುಮಾನ ಮೊತ್ತವನ್ನು ಮೀಸಲಿರಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ. 9663923347 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9845750583 ಹಾಗೂ 9343751143 ಸಂಪರ್ಕಿಸಬಹುದು ಎಂದರು.
ಆಯೋಜಕ ಪವನ ಕಣಗಲಿ, ಬಿದಿರಿನ ಕುಶಲಕರ್ಮಿ ಶಂಕರ ಸಪಾಟೆ, ಮಾರುತಿ ಸಪಾಟೆ, ಗಾಳಿಪಟ ವಿತರಕ ಪುಷ್ಪರಾಜ ಮಾನೆ, ಹಿರಣ್ಯಕೇಶಿ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಿಂಧೆ ಇದ್ದರು.