ADVERTISEMENT

ಬೆಳಗಾವಿ | ಹದಗೆಟ್ಟ ವ್ಯವಸ್ಥೆ: ಪುರಸಭೆಗೆ ಮುತ್ತಿಗೆ

ಎಲ್ಲೆಲ್ಲೂ ಕಸ, ಹಾಳಾದ ಬೀದಿದೀಪ, ಬಾರದ ಕುಡಿಯುವ ನೀರು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:04 IST
Last Updated 21 ನವೆಂಬರ್ 2025, 8:04 IST
ಪೊಟೊ- 20 ಎಸಕೆವಿ 1ಇಪಿ- ಸಂಕೇಶ್ವರ ಪುರಸಭೆಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಸಾರ್ವಜನಿಕರು  ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತ ಪಡಿಸಿದರು.
ಪೊಟೊ- 20 ಎಸಕೆವಿ 1ಇಪಿ- ಸಂಕೇಶ್ವರ ಪುರಸಭೆಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಸಾರ್ವಜನಿಕರು  ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತ ಪಡಿಸಿದರು.   

ಸಂಕೇಶ್ವರ: ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಪದೇ ಪದೇ ಆಗ್ರಹಿಸುತ್ತಿದ್ದರೂ ಸರಿಯಾಗಿ ಸ್ಪಂದಿಸದ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಬೇಸತ್ತು ಪಟ್ಟಣದ ವಾರ್ಡ್ ನಂ-1ರ ನಿವಾಸಿಗಳು ಧಿಕ್ಕಾರದ ಘೋಷಣೆ ಕೂಗುತ್ತ ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕುಂದು ಕೊರತೆಗಳ ಪರಿಹಾರಕ್ಕೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಕಾರರು ಪುರಸಭೆ ಅಧಿಕಾರಿಗಳನ್ನು, ಪುರಸಭೆ ಸದಸ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ಗಂಟೆಗೂ ಹೆಚ್ಚು ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

‘ಪುರಸಭೆಯ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯದೇ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಚರಂಡಿ ಬದಿಯ, ಖಾಲಿ ಪ್ರದೇಶಗಳಲ್ಲಿ ಕಸ ಕಡ್ಡಿ ತುಂಬಿದ್ದು ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಕೆಲವು ಬೀದಿಗಳಲ್ಲಿ ವಿದ್ಯುತ್ ದೀಪಗಳು ಕಾರ್ಯನಿರ್ವಹಿಸದೇ ಕತ್ತಲೆ ಆವರಿಸಿದೆ. ಬೀದಿ ದೀಪ ದುರಸ್ತಿ, ಎಲ್‌ಇಡಿ ಬಲ್ಬ್ ಅಳವಡಿಕೆ ಕೈಗೊಳ್ಳಬೇಕಾದ ಪುರಸಭೆ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ’ ಎಂದು ದೂರಿದರು.

ADVERTISEMENT

‘ಅನಿಯಮಿತವಾಗಿ ಬರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. 3 ದಿನಗಳ ಒಳಗೆ ನೀರು ಬಿಡುವ ವ್ಯವಸ್ಥೆ ಆಗಬೇಕು. ಮಗದುಮ್ಮ ಶಾಲೆ ಹಾಗೂ ರಾಯಲ್ ಕಾಲೊನಿ ಹತ್ತಿರವಿರುವ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಿ ಕಸದ ತೊಟ್ಟಿಗಳನ್ನು ಇಡಬೇಕು. ಪ್ರತಿದಿನ ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನ ಬರಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು. 

‘ನಿಡಸೋಸಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಾಮಗಾರಿ ವಿಳಂಬವಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿದ್ದು ಸಾಮಾನ್ಯ ಜನರ ಜೀವಕ್ಕೆ ತೊಂದರೆಯಾದರೆ ಯಾರು ಹೊಣೆ’ ಎಂದು ಆಡಳಿತದ ವಿರುದ್ಧ ಹರಿಹಾಯ್ದರು.

ಪ್ರತಿಭಟನೆಯಲ್ಲಿ ರಾಜು ಸಾನೆ, ದುಂಡಪ್ಪಾ ವಾಳಕಿ, ರಾಜು ಪಾಟೀಲ, ಚಿದು ನಿರ್ವಾಣಿಮಠ, ಮಹಾಂತೇಶ ಗುಮಚಿ, ಅನಿಲ ಪಾಟೀಲ, ಬಿ.ಡಿ. ನಾಗರಾಳಿ, ಚಿದಾನಂದ ಲಟ್ಟಿ, ಬಹಾದುರ ಲಟ್ಟಿ, ಅಸ್ಲಮ್ ಮುಲ್ತಾನಿ, ಸುನೀಲ ಸಪಾಟೆ, ರಿಶಬ್ ಪಾಟೀಲ ಇದ್ದರು.

10 ದಿನಗಳ ಕಾಲಾವಕಾಶ

ಪ್ರತಿಭಟನಕಾರರ ಮನವಿ ಪತ್ರ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ಮನವಿಕಾರರಿಗೆ ಭರವಸೆ ನೀಡಿದರು. 10 ದಿನಗಳ ಕಾಲಾವಕಾಶ ಕೋರಿದರು. ನಂತರ ಪರಿಸ್ಥಿತಿ ತಿಳಿಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.