
ಸಂಕೇಶ್ವರ: ಕಶ್ಮಲಹಾ ನದಿ, ಶುಕ್ಲತೀರ್ಥ ಎಂದು ಉಲ್ಲೇಖಿತಗೊಂಡಿರುವ ಹಿರಣ್ಯಕೇಶಿ ನದಿ ತಟದಲ್ಲಿರುವ ಶಂಕರಲಿಂಗನ ಕ್ಷೇತ್ರವು ಯಜ್ಞ– ಯಾಗಾದಿಗಳ ಪವಿತ್ರ ಸ್ಥಳವಾಗಿದೆ. ಇಲ್ಲೀಗ ಶಂಕರಲಿಂಗ ಜಾತ್ರೆ ಮಹೋತ್ಸವ ಕಳೆಗಟ್ಟಿದೆ.
ಈ ಕ್ಷೇತ್ರದಲ್ಲಿ ನಾಲ್ಕು ದಿನ ನಡೆಯುವ ರಥೋತ್ಸವಕ್ಕೆ ಶನಿವಾರವೇ ಚಾಲನೆ ನೀಡಲಾಗಿದೆ. ಜ. 25ರಂದು ರಥ ಪೂಜೆ, 26ರಂದು ರಥವು ನಾರಾಯಣ ಮಂದಿರಕ್ಕೆ ತೆರಳುವುದು, 27ರಂದು ಬನಶಂಕರಿ ದೇವಾಲಯದ ಹತ್ತಿರ ಬರುವುದು, 28ರಂದು ಮಹಾರಥೋತ್ಸವ ಜರುಗಲಿದೆ.
ಈ ಪ್ರಯುಕ್ತ ಪಟ್ಟಣದ ವಿವಿಧ ಸಂಘಟನೆಗಳು ಜೋಡೆತ್ತಿನ ಗಾಡಿ ಶರ್ಯತ್ತು, ವಾಲಿಬಾಲ್, ಕಬ್ಬಡ್ಡಿ ಮುಂತಾದ ಸ್ಪರ್ಧೆಗಳನ್ನು ಆಕರ್ಷಕ ಬಹುಮಾನದೊಂದಿಗೆ ಸಂಘಟಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವರು.
ಭವ್ಯ ಇತಿಹಾಸ: ಸಂಕೇಶ್ವರದ ಮೂಲ ಹೆಸರು ಸಾಂಖ್ಯೆಶ್ವರ. ಬಾದಾಮಿ ಚಾಲುಕ್ಯರ ಮಾಂಡಲಿಕರಾದ ಸವದತ್ತಿಯ ರಟ್ಟರು ಕ್ರಿ.ಶ. 797ರಿಂದ 980ರವರೆಗೆ ಈ ಭಾಗವನ್ನು ಆಳಿದರೆಂದು ಇತಿಹಾಸದಲ್ಲಿ ಉಲ್ಲೇಖವಿದೆ. ಹಿರಣ್ಯಕೇಶಿ ನದಿಯ ದಡದಲ್ಲಿ ಭವ್ಯವಾದ ಮಂದಿರವಿದೆ. ಕಲ್ಯಾಣದ ಚಾಲುಕ್ಯರ ಶೈಲಿಯಲ್ಲಿ ನಿರ್ವಿತವಾದ ಈ ಪ್ರಾಚೀನ ಮಂದಿರದಲ್ಲಿ ವಿಶಾಲವಾದ 26 ಕಂಬಗಳ ಮುಖ ಮಂಟಪ, ನವರಂಗ ಸುಕನಾಸಿ, ನಕ್ಷತ್ರಾಕಾರದ ತಳಹದಿಯ ಗರ್ಭ ಗುಡಿ ಇದೆ. ಭುವನೇಶ್ವರಿಯಲ್ಲಿಆಗಮ ರಾಮಾಯಣ, ಮಹಾಭಾರತಗಳ ಚಿಕ್ಕ–ಚಿಕ್ಕ ಮೂರ್ತಿಗಳ ಕೆತ್ತನೆಯ ಕೆಲಸವಿದೆ.
ಗರ್ಭ ಗುಡಿಯಲ್ಲಿ ಶಾಂತಚಿತ್ತನಾದ ಶಂಕರಲಿಂಗ ದೇವರ ಮೂರ್ತಿ ಇದೆ. ಗರ್ಭ ಗುಡಿಯ ಎದುರಿಗೆ ನ್ಯಾಯ ಮಂಟಪವಿದ್ದು, ಅಲ್ಲಿ ಈ ಹಿಂದೆ ಸ್ಥಳೀಯ ನ್ಯಾಯ ನಿರ್ಣಯಗಳ ಆಗುತ್ತಿದ್ದವೆಂದು ಹೇಳಲಾಗುತ್ತಿದೆ.
ಗುಡಿಯ ಸುತ್ತಮುತ್ತ ವಿಶಾಲ ಪಟಾಂಗಣವಿದೆ. ಮುಖ್ಯಧ್ವಾರ, ನಗರಿಖಾನೆ, ವಿಶಾಲವಾದ ಯಜ್ಞ ಶಾಲೆಗಳು ಇವೆ. ದಕ್ಷಿಣ ದ್ವಾರದಲ್ಲಿ ಸ್ನಾನ ಘಟ್ಟಗಳಿವೆ. ಮೆಟ್ಟಿಗಲುಗಳ ಹತ್ತಿರ ವೀರಗಲ್ಲುಗಳಿದ್ದು ನಿತ್ಯ ಪೂಜಿಸಲ್ಪಡುತ್ತವೆ. ಗರ್ಭ ಗುಡಿಯ ಮೇಲೆ ಎತ್ತರವಾದ ಗೋಪುರವಿದ್ದು ಭಕ್ತರ ಗಮನ ಸೆಳೆಯುತ್ತದೆ. ಸದ್ಯ ಇಲ್ಲಿ ಸಚ್ಚಿದಾನಂದ ಅಭಿನವ ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ ಪೀಠದಲ್ಲಿದ್ದಾರೆ.