ADVERTISEMENT

PV Web Exclusive | ‘ಹಾರಾಡ್ತಿರೋ’ ಸತೀಶ್ ಜಾರಕಿಹೊಳಿ!

ಎಂ.ಮಹೇಶ
Published 17 ಡಿಸೆಂಬರ್ 2020, 7:22 IST
Last Updated 17 ಡಿಸೆಂಬರ್ 2020, 7:22 IST
ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಚಾರಕ್ಕೆಂದು ಈಚೆಗೆ ಅಥಣಿ ಹೆಲಿಪ್ಯಾಡ್‌ಗೆ ಬಂದಿಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಮುಖಂಡ ಗಜಾನನ ಮಂಗಸೂಳಿ ಸ್ವಾಗತಿಸಿದ ಕ್ಷಣ
ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಚಾರಕ್ಕೆಂದು ಈಚೆಗೆ ಅಥಣಿ ಹೆಲಿಪ್ಯಾಡ್‌ಗೆ ಬಂದಿಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಮುಖಂಡ ಗಜಾನನ ಮಂಗಸೂಳಿ ಸ್ವಾಗತಿಸಿದ ಕ್ಷಣ   

ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷರೂ ಆಗಿರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅವರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ಮತ್ತು ಈ ಮೂಲಕ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಆಗಸದಲ್ಲಿ ಹಾರಾಡುತ್ತಿದ್ದಾರೆ.

ಅವರ ವಿಷಯದಲ್ಲಿ, ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ ಎನ್ನುವ ಮಾತು ಹಳತಾಯಿತು. ಏಕೆಂದರೆ, ಅವರೀಗ ಹೆಲಿಕಾಪ್ಟರ್‌ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ‘ಗಮ್ಯ’ ತಲುಪುವುದಕ್ಕಾಗಿ ಹಾರಾಟದ ಮಾರ್ಗಕ್ಕೆ ಒತ್ತು ನೀಡುತ್ತಿದ್ದಾರೆ.

2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಾಡಿಗೆ ಹೆಲಿಕಾಪ್ಟರ್‌ ಬಳಸಿದ್ದ ಅವರು, 2018ರ ಚುನಾವಣೆ ಘೋಷಣೆಗೂ ಮುನ್ನವೇ ಸ್ವಂತ ಹೆಲಿಕಾಪ್ಟರ್‌ ಖರೀದಿಸಿದ್ದರು. ವಿಧಾನಸಭೆ ಚುನಾವಣೆ ನಂತರ ಇದೀಗ, ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಅದಕ್ಕೆ ಕೆಲಸ ಕೊಡುತ್ತಿದ್ದಾರೆ. ನಿತ್ಯ 2–3 ಕಡೆಗಳಿಗೆ ಹೆಲಿಕಾಪ್ಟರ್‌ನಲ್ಲೇ ಪ್ರಯಾಣಿಸಿ, ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಸುತ್ತಾಟವನ್ನೂ ಆಕಾಶ ಮಾರ್ಗದಲ್ಲೇ ಮಾಡುತ್ತಿದ್ದಾರೆ. ಪಕ್ಷದ ನಾಯಕರಿಗೂ ‘ಹೆಲಿಕಾಪ್ಟರ್‌ ಸೇವೆ’ ಒದಗಿಸುತ್ತಿದ್ದಾರೆ.

ADVERTISEMENT

ಅಧಿಕಾರವಿಲ್ಲದಿದ್ದರೂ ತಮ್ಮ ‘ಪ್ರಭಾವ’ ಕಡಿಮೆಯಾಗಿಲ್ಲ ಮತ್ತು ಬೆಳವಣಿಗೆ ಕುಂಠಿತಗೊಂಡಿಲ್ಲ ಎಂಬ ಸಂದೇಶವನ್ನು ಅವರು ಬೆಳಗಾವಿಯ ರಾಜಕಾರಣಿಗಳಿಗೆ ರವಾನಿಸುತ್ತಿದ್ದಾರೆ.

ಹೆಲಿಕಾಪ್ಟರ್‌ ಬಳಸಿ ಗಮನಸೆಳೆಯುವ ಮೂಲಕ ಈ ಕಾಂಗ್ರೆಸ್ ನಾಯಕ ಯುವಜನರ ಮನ ಗೆಲ್ಲಲ್ಲು ಯತ್ನಿಸುತ್ತಿದ್ದಾರೆ. ತಮ್ಮ ‘ಸಾಹುಕಾರ’ ಹೆಲಿಕಾಪ್ಟರ್‌ನಲ್ಲಿ ಏರಲು ಹೋಗುವುದು, ಏರುವುದು, ಇಳಿಯುವುದನ್ನು ಅಭಿಮಾನಿಗಳು ವಿಡಿಯೊ ಮಾಡಿ ಸಿನಿಮಾದ ಹಾಡುಗಳನ್ನು ಮಿಕ್ಸಿಂಗ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಹೆಲಿಪ್ಯಾಡ್‌ನಲ್ಲಿ ಅಭಿಮಾನಿಗಳ ದಂಡೇ ನೆರೆಯುತ್ತಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ‘ದೊಡ್ಡ ಸ್ಥಾನ’ದ ಮೇಲೆ ‘ಕಣ್ಣಿಟ್ಟಿರುವ’ ಅವರು, ಕಾಂಗ್ರೆಸ್‌ನಲ್ಲಿದ್ದ ಸಹೋದರ ರಮೇಶ ಜಾರಕಿಹೊಳಿ ಮತ್ತು ಇತರರು ಬಿಜೆಪಿಗೆ ಸೇರಿದ ನಂತರ ಜಿಲ್ಲೆಯಲ್ಲಿ ಮಂಕಾಗಿರುವ ಪಕ್ಷಕ್ಕೆ ಚೈತನ್ಯ ತುಂಬಲು ಶ್ರಮಿಸುತ್ತಿದ್ದಾರೆ. ಅರ್ಧಕ್ಕೆ ನಿಂತಿದ್ದ ಜಿಲ್ಲಾ ಕಾಂಗ್ರೆಸ್‌ ಭವನವನ್ನು ಕಾರ್ಪೊರೇಟ್ ಕಂಪನಿಯ ಕಚೇರಿಯ ಮಾದರಿಯಲ್ಲಿ ನಿರ್ಮಿಸಲು ಸಮಯದೊಂದಿಗೆ ಧನವನ್ನೂ ವಿನಿಯೋಗಿಸಿ ‘ಕೊಡುಗೆ’ ನೀಡಿದ್ದಾರೆ. ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೊದಲಾದ ನಾಯಕರಿಂದಲೂ ಮೆಚ್ಚಿಗೆ ಗಿಟ್ಟಿಸಿಕೊಂಡಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮುಂಬೈ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿ ಭಾಗದಲ್ಲಿ ಪಕ್ಷದ ಸಂಘಟನೆಯ ನೊಗ ಹೊತ್ತಿರುವ ಅವರು, ಪಕ್ಷದ ಸಂಘಟನೆಗಾಗಿ ಮತ್ತು ಕೇಡರ್‌ ಆಧಾರಿತವಾಗಿ ಬೆಳೆಸಲು ಕಾರ್ಯಕರ್ತರಿಗೆ ಅಗತ್ಯ ತರಬೇತಿ ಕೊಡುವುದಕ್ಕಾಗಿ ಗೋಕಾಕ ತಾಲ್ಲೂಕಿನ ಘಟಪ್ರಭಾದಲ್ಲಿ ಕಾಂಗ್ರೆಸ್ ಸೇವಾದಳ ಕೇಂದ್ರ ಸಜ್ಜುಗೊಳಿಸಿದ್ದಾರೆ. ಅದಕ್ಕೆ ಹೊಸ ರೂಪ ನೀಡಿ ಅಭಿವೃದ್ಧಿಪಡಿಸುವಲ್ಲೂ ಅವರದ್ದು ಪ್ರಮುಖ ಪಾತ್ರವಿದೆ. ಅಧಿಕೃತ ಉದ್ಘಾಟನಾ ಸಮಾರಂಭಕ್ಕೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುವ ಯೋಜನೆ ಅವರದಾಗಿದೆ. ಬೆಳಗಾವಿ ಕಾಂಗ್ರೆಸ್ ಎಂದರೆ ‘ಸತೀಶ್ ಜಾರಕಿಹೊಳಿಯೇ ಅಂತಿಮ’ ಎನ್ನುವಂತಾಗಬೇಕು ಎನ್ನುವುದು ಅವರ ಮಹತ್ವಾಕಾಂಕ್ಷೆಯಾಗಿದೆ ಎನ್ನುತ್ತಾರೆ ಬೆಂಬಲಿಗರು.

ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗಲಿರುವ ಉಪ ಚುನಾವಣೆಗೆ ಪಕ್ಷ ಅವರನ್ನು ಉಸ್ತುವಾರಿಯಾಗಿ ಮಾಡಿದೆ. ಅಲ್ಲಿಗೆ ಆಗಾಗ ಅವರು ಹೆಲಿಕಾಪ್ಟರಲ್ಲೇ ಪ್ರಯಾಣಿಸುತ್ತಿದ್ದಾರೆ.

ತಮ್ಮ ಮಾನವ ಬಂಧುತ್ವ ವೇದಿಕೆ ಮೂಲಕ ಮೂಢನಂಬಿಕೆ ವಿರುದ್ಧದ ಹಾಗೂ ವೈಚಾರಿಕ ತಳಹದಿಯ ಕಾರ್ಯಕ್ರಮಗಳನ್ನು ನಡೆಸಿ ರಾಜ್ಯದಾದ್ಯಂತ ಗಮನಸೆಳೆದಿದ್ದಾರೆ. ಬೆಂಬಲಿಗರ ಪಡೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ತಮ್ಮ ಸಾಮಾಜಿಕ ಚಟುವಟಿಕೆಗಳಿಗೂ ಹೆಲಿಕಾಪ್ಟರ್ ಬಳಸುತ್ತಾ, ಸಮಯ ಸದ್ವಿನಿಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಗಾದಿಗೆ ‘ಟವೆಲ್ ಹಾಕುವ’ ದೂರದೃಷ್ಟಿ ಅವರದಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಉದ್ಯಮಿಯೂ ಆಗಿರುವ ಅವರು, ಇಷ್ಟೆಲ್ಲಾ ‘ಹೂಡಿಕೆ’ ಮಾಡಿದ ಮೇಲೆ ‘ಲಾಭ’ ನಿರೀಕ್ಷಿಸದೇ ಇರುತ್ತಾರೆಯೇ?! 2023ರ ವಿಧಾನಸಭೆ ಚುನಾವಣೆ ಬಳಿಕ ಎಲ್ಲ ಲೆಕ್ಕಾಚಾರಗಳೂ ಸ್ಪಷ್ಟವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.