ADVERTISEMENT

ರಮೇಶ ಮುಸ್ಲಿಂ ಟೋಪಿ ಹಾಕಿದ್ದನ್ನು ಮಾತ್ರ ನೋಡಿದ್ದೇನೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 10:32 IST
Last Updated 15 ಜನವರಿ 2021, 10:32 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಆರ್‌ಎಸ್ಎಸ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ. ಜಲಸಂಪನ್ಮೂಲ ಸಚಿವ, ಸಹೋದರ ರಮೇಶ ಜಾರಕಿಹೊಳಿ‌ ಕಪ್ಪು ಟೋಪಿ ಮತ್ತು ಖಾಕಿ ಬಣ್ಣದ ಹಾಫ್ ಪ್ಯಾಂಟ್ ಧರಿಸಿದ್ದು ನೋಡಿಲ್ಲ‌. ಮುಸ್ಲಿಂ‌‌ ಟೋಪಿ ಹಾಕಿದ್ದನ್ನು ಮಾತ್ರ ನೋಡಿದ್ದೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

‘ನಾನು ಜನಸಂಘದವನು. ಕರಿ ಟೋಪಿ, ಖಾಕಿ ಬಣ್ಣದ ಹಾಫ್ ಪ್ಯಾಂಟ್ ಹಾಕಿಕೊಳ್ಳುತ್ತಿದ್ದೆ’ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಇಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಸತೀಶ, ‘ನಮ್ಮ ತಂದೆ ಅವರ ಸ್ನೇಹಿತ ಪತ್ರಾವಳಿ ಎನ್ನುವವರು ಆರ್‌ಎಸ್‌ಎಸ್‌ನಲ್ಲಿದ್ದರು. ತಂದೆ, ವೈಯಕ್ತಿಕ ಬಾಂಧವ್ಯದಿಂದ ಅವರ ಬಳಿ ಹೋಗಿ ಕೂರುತ್ತಿದ್ದರು. ಅದನ್ನೇ ರಮೇಶ ಆರ್‌ಎಸ್‌ಎಸ್ ಎಂದು ಬಿಂಬಿಸುತ್ತಿದ್ದಾರೆ. 30 ವರ್ಷಗಳಲ್ಲಿ ರಮೇಶ ಆರ್‌ಎಸ್‌ಎಸ್‌ ಮೂಲದ ಬಗ್ಗೆ ಹೇಳಿರಲೇ ಇಲ್ಲ. ಈಗ ಹೇಳಿಕೆ ಕೊಟ್ಟಿರುವುದು ಆಶ್ಚರ್ಯ ತಂದಿದೆ’ ಎಂದು ತಿಳಿಸಿದರು.

ರಮೇಶ ಮುಸ್ಲಿಮರು ಧರಿಸುವ ಟೋಪಿ ಹಾಕಿದ್ದ ಫೋಟೊ ಪ್ರದರ್ಶಿಸಿದರು.

ADVERTISEMENT

‘ನಾವು ಯಾವತ್ತೂ ಆರ್‌ಎಸ್‌ಎಸ್‌ ಭಾಗವಾಗಿರಲಿಲ್ಲ. ರಮೇಶ ಹಿಂದಿನಿಂದಲೂ ಮುಸ್ಲಿಮರ ಪರ ಇದ್ದು ಹೋರಾಡಿದವರು. ಮುಂದೆಯೂ ಹೀಗೆಯೇ ಇರುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿಯಲ್ಲಿದ್ದರೂ ಮುಸ್ಲಿಮರು, ಶೋಷಿತರ ಪರವಾಗಿ ಇರಬೇಕು. ಹಿಂದಿನ ಹೋರಾಟ, ಇತಿಹಾಸ ಮರೆಯಬಾರದು. ಸಿದ್ಧಾಂತಗಳನ್ನು ಬದಲಿಸಬಾರದು‌’ ಎಂದು ಕೋರಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಈ ತಿಂಗಳ ಅಂತ್ಯದಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ. ಮುಂದಿನ ತಿಂಗಳ ಅಂತ್ಯದೊಳಗೆ ಚುನಾವಣೆ ಮುಗಿಯಲೇಬೇಕಿದೆ. ನಮ್ಮ ಅಭ್ಯರ್ಥಿ ಬಗ್ಗೆ ಇನ್ನೂ ಚರ್ಚೆ ಹಂತದಲ್ಲಿದೆ. ನಾವು ಸಲ್ಲಿಸುವ ಹೆಸರು ಅಂತಿಮವಾಗುತ್ತದೆ. ನಾನೇ ನಿಲ್ಲಬೇಕು ಎಂಬ ಒತ್ತಡವೇನಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.