ADVERTISEMENT

ಸವದತ್ತಿಯ 35 ಹಳ್ಳಿ ಬೈಲಹೊಂಗಲಕ್ಕೆ: ಜಿಲ್ಲೆ ವಿಭಜನೆಗೆ ಸಿಕ್ಕಿತು ಹೊಸ ತಿರುವು

ಸಂತೋಷ ಈ.ಚಿನಗುಡಿ
Published 19 ಡಿಸೆಂಬರ್ 2025, 2:56 IST
Last Updated 19 ಡಿಸೆಂಬರ್ 2025, 2:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಳಗಾವಿ: ತಾಲ್ಲೂಕು ಆಡಳಿತವನ್ನು ಸುಗಮಗೊಳಿಸುವುದು ಮತ್ತು ಜನರ ಸಂಕಷ್ಟ ನಿವಾರಿಸುವ ಉದ್ದೇಶದಿಂದ ಸವದತ್ತಿ ತಾಲ್ಲೂಕಿನ 35 ಹಳ್ಳಿಗಳನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಲು ರಾಜ್ಯ ಸರ್ಕಾರ ಬುಧವಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಈ ಮೂಲಕ ಜಿಲ್ಲಾ ವಿಭಜನೆಗೂ ಹೊಸದೊಂದು ತಿರುವು ಸಿಕ್ಕಂತಾಗಿದೆ.

ಬೈಲಹೊಂಗಲಕ್ಕೆ ಕೂಗಳತೆ ದೂರದಲ್ಲಿ ಇರುವ ಹಲವು ಹಳ್ಳಿಗಳು ಸವದತ್ತಿ ತಾಲ್ಲೂಕಿಗೆ ಸೇರಿವೆ. ಹಳ್ಳಿಗಳ ವಿದ್ಯಾರ್ಥಿಗಳು, ರೈತರು, ಮಹಿಳೆಯರು, ನೌಕರರು ಯಾವುದೇ ಕೆಲಸಕ್ಕೂ ಸಮೀಪದ ಬೈಲಹೊಂಗಲ ಬಿಟ್ಟು ದೂರದ ಸವದತ್ತಿಗೆ ಅಲೆಯಬೇಕಾಗಿದೆ.

ADVERTISEMENT

ಉದಾಹರಣೆಗೆ; ಬೈಲಹೊಂಗಲದಿಂದ ಮರಕುಂಬಿ ಗ್ರಾಮ ಕೇವಲ 3 ಕಿ.ಮೀ ದೂರದಲ್ಲಿದೆ. ಆದರೆ, ಇದು 40 ಕಿ.ಮೀ ದೂರದ ಸದ್ಯ ಸವದತ್ತಿ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟಿದೆ. ಹಾರೂಗೊಪ್ಪ, ಇಂಚಲ ಹಾಗೂ ಹೊಸೂರು ಹಳ್ಳಿಗಳು 5 ಕಿ.ಮೀ ಒಳಗಿವೆ. ಚಚಡಿ ಗ್ರಾಮ 10 ಕಿ.ಮೀ ಅಂತರದಲ್ಲಿದೆ. ಆದರೆ, ಇವುಗಳ ತಾಲ್ಲೂಕು ಕೇಂದ್ರ 40ರಿಂದ 50 ಕಿ.ಮೀ ದೂರದ ಸವದತ್ತಿ.

ಸಣ್ಣ ಪ್ರಮಾಣ ಪತ್ರಕ್ಕೆ, ಪತ್ರ ವ್ಯವಹಾರಗಳಿಗೆ, ಆಸ್ತಿ ನೋಂದಣಿಗೆ, ಜನನ– ಮರಣ ಪ್ರಮಾಣ ಪತ್ರ, ಆಸ್ತಿ ನೋಂದಣಿ ಸೇರಿದಂತೆ ಪ್ರತಿಯೊಂದಕ್ಕೂ ಜನ ಕನಿಷ್ಠ 40 ಕಿ.ಮೀ ಪ್ರಯಾಣ ಮಾಡಬೇಕಾಗಿದೆ. ಇವುಗಳನ್ನು ಬೈಲಹೊಂಗಲಕ್ಕೆ ಸೇರಿಸಿದರೆ ಕೇವಲ 5ರಿಂದ 15 ನಿಮಿಷಗಳಲ್ಲಿ ತಾಲ್ಲೂಕು ಕೇಂದ್ರ ತಲುಪುತ್ತಾರೆ.

ಹೀಗಾಗಿ, ತಾಲ್ಲೂಕು ಕೇಂದ್ರ ಬದಲಾಯಿಸುವಂತೆ ಈ ಭಾಗದ ಜನ ದಶಕಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದರು. ಆದರೆ, ಮತಗಳ ವಿಭಜನೆಯ ಕಾರಣ ಜನಪ್ರತಿನಿಧಿಗಳು ಇದಕ್ಕೆ ಮನಸ್ಸು ಮಾಡಿರಲಿಲ್ಲ. ಈಗ ರಾಜ್ಯ ಸರ್ಕಾರ ಮೌನವಾಗಿ ಗೆಜೆಟ್‌ ಅಧಿಸೂಚನೆ ಹೊರಡಿಸುವ ಮೂಲಕ ಅಚ್ಚರಿ ನೀಡಿದೆ.

ಸವದತ್ತಿ ಮತ್ತೆ ವಿಭಜನೆ: ಐದು ವರ್ಷಗಳ ಹಿಂದೆ ಸವದತ್ತಿ ತಾಲ್ಲೂಕನ್ನು ವಿಭಜಿಸಿ ಯರಗಟ್ಟಿ ಕೇಂದ್ರವಾಗಿ ಹೊಸ ತಾಲ್ಲೂಕು ರಚನೆ ಮಾಡಲಾಗಿದೆ. ಈಗ ಸವದತ್ತಿ ತಾಲ್ಲೂಕಿನಲ್ಲಿ 32 ಗ್ರಾಮ ಪಂಚಾಯಿತಿ, 88 ಗ್ರಾಮಗಳಿವೆ. 12 ಗ್ರಾಮ ಪಂಚಾಯಿತಿ ಹಾಗೂ 33 ಹಳ್ಳಿಗಳಲ್ಲಿ ಕೂಡಿಸಿ ಯರಗಟ್ಟಿ ತಾಲ್ಲೂಕು ರಚನೆ ಮಾಡಲಾಗಿದೆ.

ಸದ್ಯ ಸವದತ್ತಿಯಲ್ಲಿ ಉಳಿದ 88 ಹಳ್ಳಿಗಳ ಪೈಕಿ 35ನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಲಾಗುತ್ತಿದೆ. ಇದರೊಂದಿಗೆ ಬೈಲಹೊಂಗಲ ತಾಲ್ಲೂಕಿನ ಹಳ್ಳಿಗಳ ಸಂಖ್ಯೆ 117ಕ್ಕೆ ಏರಲಿದೆ. ಆದರೆ, ಸವದತ್ತಿ ತಾಲ್ಲೂಕು ಹಳ್ಳಿಗಳ ಸಂಖ್ಯೆ 53ಕ್ಕೆ ಇಳಿಯಲಿದೆ.

ಜನಸಂಖ್ಯೆ, ಭೂ ಪ್ರದೇಶ, ಭೂ ಕಂದಾಯ ಮತ್ತು ಸಾರ್ವಜನಿಕರಿಂದ ಬೇಡಿಕೆ ಪರಿಗಣಿಸಿ ಈ ಹೆಜ್ಜೆ ಇಡಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ, 1964 (ಕರ್ನಾಟಕ ಕಾಯ್ದೆ ಸಂಖ್ಯೆ 12, 1964)ರ ಸೆಕ್ಷನ್ 4ರ ಉಪ-ವಿಭಾಗ (4)ರ ಅಡಿಯಲ್ಲಿ ಈ ವಿಂಗಡಣೆ ಮಾಡಲಾಗಿದೆ. ಇದಕ್ಕೆ ತಕರಾರುಗಳಿದ್ದಲ್ಲಿ ಸಲ್ಲಿಸಲು ಅವಕಾಶ ಕೂಡ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಬೈಲಹೊಂಗಲಕ್ಕೆ ಸೇರುವ ಹಳ್ಳಿಗಳಿವು

ಮುರಗೋಡ, ಸುಬ್ಬಾಪುರ, ರಾಮಾಪುರ, ರಾಮಾಪುರ ತಾಂಡಾ, ಬಸರಗಿ ಕೆ.ಎಂ, ಚಚಡಿ, ಗುಂಡ್ಲೂರ, ಹಾರೂಗೊಪ್ಪ, ಗೋಂತಮಾರ, ತಡಸಲೂರ, ಹಲಕಿ, ಹಲಕಿ ತಾಂಡಾ, ಹೂಲಿಕೇರಿ ತಾಂಡಾ, ಜಂಗಮ ಬುಡಕಟ್ಟಿ, ಹಿರೇಬುದನೂರ, ಚಿಕ್ಕಬುದನೂರ, ಮಳಗಲಿ, ಕುಟ್ರನಟ್ಟಿ, ಓಬಲದಿನ್ನಿ, ಇಂಚಲ, ಮುತವಾಡ, ಮರಕುಂಬಿ, ಚಿಕ್ಕೊಪ್ಪ ಕೆ.ಎಂ, ಹಿರೇಕೊಪ್ಪ ಕೆ.ಎಂ, ಹೊಸೂರ, ಮಲ್ಲೂರ, ಮಾತೊಳ್ಳಿ, ಸೊಗಲ, ಇಂಗಳಗಿ, ಕಾಗಿಹಾಳ, ಕಾಗಿಹಾಳ ತಾಂಡಾ, ರುದ್ರಾಪುರ, ಗಿರಿನಗರ, ಕಾರಿಮಣಿ, ದುಂಡನಕೊಪ್ಪ.

ಜಿಲ್ಲೆ ವಿಭಜನೆಗೆ ಮುನ್ನುಡಿ

ಬೆಳಗಾವಿ ಜಿಲ್ಲೆ ವಿಭಜಿಸಿ ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಕೇಂದ್ರವಾಗಿ ಹೊಸ ತಾಲ್ಲೂಕು ರಚನೆಗೆ ಮೂರು ದಶಕಗಳಿಂದ ಬೇಡಿಕೆ ಇದೆ. ಈ ಮೂರೂ ಕೇಂದ್ರಗಳಿಂದ ಬೈಲಹೊಂಗಲ ಹಾಗೂ ಸವದತ್ತಿ 85 ಕಿ.ಮೀ.ಗಿಂತ ಹೆಚ್ಚು ದೂರವಾಗುತ್ತದೆ. ಹಾಗಾಗಿ, ಬೈಲಹೊಂಗಲ ಕೇಂದ್ರವಾಗಿಯೂ ಮತ್ತೊಂದು ಜಿಲ್ಲೆ ರಚಿಸಬೇಕು ಎಂಬ ಒತ್ತಾಸೆಯೂ ಇದೆ.

‘ಬೈಲಹೊಂಗಲನ್ನು ಜಿಲ್ಲಾ ಕೇಂದ್ರ ಮಾಡಲು ನಮ್ಮ ಸಮ್ಮತಿ ಇದೆ. ಇಲ್ಲದೇ ಹೋದರೆ ಅಖಂಡ ಜಿಲ್ಲೆ ಹಾಗೇ ಇರಲಿ. ಒಂದು ವೇಳೆ ಚಿಕ್ಕೋಡಿ, ಗೋಕಾಕನ್ನು ಮಾತ್ರ ಜಿಲ್ಲೆ ಮಾಡುವುದಾದರೆ ನಮ್ಮನ್ನು ಧಾರವಾಡ ಜಿಲ್ಲೆಗೆ ಸೇರಿಸಿ’ ಎಂಬ ಬೇಡಿಕೆ ಸವದತ್ತಿ ತಾಲ್ಲೂಕು ಜನರದ್ದು.

ನಿಗದಿತ ಜಿಲ್ಲಾ ಕೇಂದ್ರಗಳಿಗಿಂತ ಧಾರವಾಡ (18 ಕಿ.ಮೀ) ಅತ್ಯಂತ ಸಮೀಪ ಎಂಬ ವಾದವೂ ಜನರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.