ADVERTISEMENT

ಸವದತ್ತಿ | ಗ್ರಾಮದೇವಿ ಜಾತ್ರೆಗೆ ₹1 ಕೋಟಿ ಅನುದಾನ: ಶಾಸಕ ವೈದ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 2:48 IST
Last Updated 29 ಅಕ್ಟೋಬರ್ 2025, 2:48 IST
ಸವದತ್ತಿಯಲ್ಲಿ ಮಂಗಳವಾರ ನಡೆದ ಗ್ರಾಮದೇವಿ ಜಾತ್ರಾಮಹೋತ್ಸವ ಸಭೆಯಲ್ಲಿ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿದರು
ಸವದತ್ತಿಯಲ್ಲಿ ಮಂಗಳವಾರ ನಡೆದ ಗ್ರಾಮದೇವಿ ಜಾತ್ರಾಮಹೋತ್ಸವ ಸಭೆಯಲ್ಲಿ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿದರು   

ಸವದತ್ತಿ: ಗ್ರಾಮದೇವಿ ಜಾತ್ರೆಯನ್ನು ಜಾತ್ಯತೀತ, ಪಕ್ಷಾತೀತವಾಗಿ ಎಲ್ಲರೂ ಸೇರಿ ಆಚರಿಸೋಣ. ಜಾತ್ರಾ ಕಮೀಟಿ ಅಡಿಟ್ ವರದಿ ನೀಡಿದರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹1 ಕೋಟಿ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.

ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಗ್ರಾಮದೇವಿ ಜಾತ್ರಾ ಮಹೋತ್ಸವ ಸಭೆಯಲ್ಲಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಈ ಜಾತ್ರೆಯನ್ನು ಪ್ರತಿ 5 ವರ್ಷಕ್ಕೊಮ್ಮೆ ನಡೆಸಲು ಯೋಜನೆ ಸಿದ್ಧ ಪಡಿಸೋಣ. ಜಾತ್ರೆ ಸಿದ್ಧತೆಯನ್ನು ತ್ವರಿತವಾಗಿ ಕಾಮಗಾರಿ ಆರಂಭಿಸಲು ಶಾಸಕರ ಅನುದಾನ ನೀಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ, ಅಲಂಕಾರಿಕ ವಿದ್ಯುತ್ ದೀಪ, ಪ್ರಸಾದ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ, ಸ್ವಚ್ಛತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು ಎಂದರು.

ADVERTISEMENT

ಡಿಸಿಸಿ ನಿರ್ದೇಶಕ ವಿರೂಪಾಕ್ಷ ಮಾಮನಿ ಮಾತನಾಡಿ, ಇಲ್ಲಿವರೆಗೂ ಜರುಗಿದ ಪೂರ್ವ ಸಿದ್ಧತೆಗಳನ್ನು ವಿವರಿಸಿದರು.  

ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಮಾತನಾಡಿ, ಕಂದಾಯ ಇಲಾಖೆಯಿಂದ ಜಾತ್ರೆಗೆ ಸಕಲ ವ್ಯವಸ್ಥೆಯನ್ನು ಮುತುವರ್ಜಿ ವಹಿಸಿ ಕಲ್ಪಿಸಲಾಗುವುದು ಎಂದರು. ಟಿಎಚ್‌ಒ ಶ್ರೀಪಾದ್ ಸಬನೀಸ್ ಮಾತನಾಡಿದರು.

44 ವರ್ಷಗಳ ನಂತರ ನಡೆಸಲಾಗುತ್ತಿರುವ ಗ್ರಾಮದೇವಿ ಜಾತ್ರೆಯ ದಿನಾಂಕವನ್ನು ಮೇ 1 ರಿಂದ 16 ರೊಳಗೆ ದಿನ ನಿಗದಿಪಡಿಸಿ ಶೀಘ್ರದಲ್ಲಿ ಪ್ರಕಟಿಸಲಾಗುವುದು. ದೇವಿಯರ ಪ್ರತಿಷ್ಠಾಪನೆ, ಪ್ರತಿ ವಾರ್ಡ್‌ಗಳ  ಭಕ್ತರಿಂದ ಉಡಿ ತುಂಬುವದು, ಕೊನೆಯ ದಿನ ಸೀಮೆ ದಾಟುವ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಪ್ರತಿ ಎಕರೆಗೆ ₹1 ಸಾವಿರ ದೇಣಿಗೆ ಪಡೆಯುವುದು ಹಾಗೂ 10 ದಿನಗಳ ಕಾಲ ಉಪನ್ಯಾಸ, ಧಾರ್ಮಿಕ ಸಭೆ, ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.

ಆರೋಗ್ಯ, ವಾರ್ತಾ ಮತ್ತು ಪ್ರಚಾರ, ಅತಿಥಿ ಸತ್ಕಾರ, ಆರೋಗ್ಯ, ಕಾನೂನು, ಪ್ರಸಾದ, ಧಾರ್ಮಿಕ ಕಾರ್ಯಕ್ರಮ, ಲೆಕ್ಕ ಪತ್ರ ನಿರ್ವಹಣೆ, ಪೆಂಡಾಲ, ಸಭೆ ಸಮಾರಂಭ ಹಾಗೂ ಇತರೆ ಉಪ ಸಮಿತಿಗಳನ್ನು ರಚಿಸಲು ಕ್ರಮಕೈಗೊಳ್ಳಲಾಯಿತು.

ಮಂಜುನಾಥ ಪಾಚಂಗಿ, ಶ್ರೀಶೈಲ ಮುತಗೊಂಡ, ಶಿವಾನಂದ ಹೂಗಾರ, ಬಸವರಾಜ ಅರಮನಿ, ಚಂದ್ರು ಶಾಮರಾಯನವರ, ಗದಿಗೆಪ್ಪ ಕುರಿ, ಮೈಲಾರಿ ಹೊಸಮನಿ ನೀಲಪ್ಪ ಅಣ್ಣಿಗೇರಿ, ಎಂ.ಎಸ್. ಪುರದಗುಡಿ, ಮಲ್ಲು ಬೀಳಗಿ, ತವನಪ್ಪ ಜೈನರ, ಎಂ.ಕೆ. ಬೇವೂರ, ಬರಮಪ್ಪ ಅಣ್ಣಿಗೇರಿ, ಸತ್ಯಪ್ಪ ಸೋಮಣ್ಣವರ, ಸಂತೋಷ ನೊರೆಯವರ, ಬಸವರಾಜ ಆಯಟ್ಟಿ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.