ADVERTISEMENT

ಮುಡಗಿನಕೊಪ್ಪದ ಈ ಶಾಲೆ ‘ಪರಿಸರ ಮಿತ್ರ’

ಸತತ 3 ಬಾರಿ ಪ್ರಶಸ್ತಿ ಪಡೆದ ಶ್ರೇಯ

ಪ್ರಸನ್ನ ಕುಲಕರ್ಣಿ
Published 13 ಸೆಪ್ಟೆಂಬರ್ 2019, 19:30 IST
Last Updated 13 ಸೆಪ್ಟೆಂಬರ್ 2019, 19:30 IST
ಖಾನಾಪುರ ತಾಲ್ಲೂಕು ಮುಡಗಿನಕೊಪ್ಪ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮುಂಭಾಗದಲ್ಲಿರುವ ಕಾರಂಜಿ ಆಕರ್ಷಿಸುತ್ತಿದೆ
ಖಾನಾಪುರ ತಾಲ್ಲೂಕು ಮುಡಗಿನಕೊಪ್ಪ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮುಂಭಾಗದಲ್ಲಿರುವ ಕಾರಂಜಿ ಆಕರ್ಷಿಸುತ್ತಿದೆ   

ಖಾನಾಪುರ: ಪ್ರವೇಶ ದ್ವಾರದ ಬಳಿ ಹೂದೋಟ, ಕಾರಂಜಿಯ ಸೊಬಗು, ಅಂಗಳದ ತುಂಬಾ ವಿವಿಧ ಪ್ರಕಾರದ ಗಿಡಗಳು, ಸುತ್ತಲೂ ಬಗೆಬಗೆಯ ಮರ–ಗಿಡಗಳಿಂದ ಕಂಗೊಳಿಸುವ ಉದ್ಯಾನ ಮತ್ತು ಹಚ್ಚ ಹಸುರಿನ ವಾತಾವರಣ.

– ತಾಲ್ಲೂಕಿನ ಮುಡಗಿನಕೊಪ್ಪ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿಶೇಷಗಳಿವು. ಅಲ್ಲಿ ಕೈಗೊಂಡಿರುವ ಪರಿಸರ ಸ್ನೇಹಿ ಕ್ರಮಗಳಿಂದಾಗಿಯೇ ಈ ಶಾಲೆ ಮೂರು ವರ್ಷಗಳಿಂದ ಸತತವಾಗಿ ‘ಜಿಲ್ಲಾ ಮಟ್ಟದ ಪರಿಸರಮಿತ್ರ ಪ್ರಶಸ್ತಿ’ಯನ್ನು ಪಡೆದು ತಾಲ್ಲೂಕಿನಲ್ಲೇ ಉತ್ತಮ ಶಾಲೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ತಾಲ್ಲೂಕಿನ ದೇವಲತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಈ ಶಾಲೆ ಮಾದರಿಯಾಗಿದ್ದು, ಗಮನಸೆಳೆಯುತ್ತಿದೆ.

ADVERTISEMENT

ಪಠ್ಯದೊಂದಿಗೆ ಪರಿಸರ ಪಾಠ:

ಶಿಸ್ತು, ಸ್ವಚ್ಛತೆ, ಸಮಯಪಾಲನೆಯಲ್ಲೂ ಮುಂದಿದೆ. ಇಲ್ಲಿಯ ಮಕ್ಕಳಿಗೆ ಪಾಠದೊಂದಿಗೆ, ಪರಿಸರ ಸಂರಕ್ಷಣೆ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟು ಕ್ರಮಬದ್ಧವಾದ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವ ಎಲ್ಲ ಯೋಜನೆಗಳನ್ನು ನಡೆಸಲಾಗುತ್ತಿದೆ. ಹೀಗಾಗಿ, ಗ್ರಾಮದ ಎಲ್ಲ ಮಕ್ಕಳು ಕೂಡ ಈ ಶಾಲೆಯಲ್ಲೇ ಓದುತ್ತಿದ್ದಾರೆ. ‘ಪಾಲಕರು ಶಾಲೆಯ ಮೇಲೆ ಅಪಾರ ಅಭಿಮಾನ ಇಟ್ಟಿದ್ದಾರೆ. ಇದುವರೆಗೂ ನಮ್ಮೂರಿನಿಂದ ಅಕ್ಕಪಕ್ಕದ ಊರುಗಳ ಖಾಸಗಿ ಶಾಲೆಗೆ ಒಂದು ಮಗುವೂ ದಾಖಲಾಗಿಲ್ಲ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಸನದಿ.

‘ನಮ್ಮ ಶಾಲೆಯಲ್ಲಿ ಪ್ರಸಕ್ತ ವರ್ಷ 1ರಿಂದ 5ನೇ ತರಗತಿಯವರೆಗೆ ಒಟ್ಟು 38 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಮತ್ತು ಪಾಲಕರ ಸಹಕಾರದಿಂದ ಆವರಣದಲ್ಲಿ ತೆಂಗು, ಬಾಳೆ, ಪರಂಗಿ ಮತ್ತಿತರ 30 ಜಾತಿಯ ಗಿಡ–ಮರಗಳನ್ನು ಬೆಳೆಸಲಾಗಿದೆ. ವಿವಿಧ ಜಾತಿಯ ಹೂವಿನ ಗಿಡಗಳಿವೆ. ಬದನೆಕಾಯಿ, ಕೊತ್ತಂಬರಿ ಸೊಪ್ಪು, ಬೀನ್ಸ್, ಮೂಲಂಗಿ, ಪಾಲಕ್, ನುಗ್ಗೆಕಾಯಿ ಮೊದಲಾದ ತರಕಾರಿ ಬೆಳೆಸಲಾಗಿದೆ. ಜಿಲ್ಲಾ ‍ಪಂಚಾಯ್ತಿ ಸಹಯೋಗದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಇದನ್ನು ಬಳಸಿಕೊಂಡು ಶಾಲೆಯ ಮುಂಭಾಗದಲ್ಲಿ ಕಾರಂಜಿ ನಿರ್ಮಿಸಲಾಗಿದೆ’ ಎಂದು ಮುಖ್ಯಶಿಕ್ಷಕ ಬಿ.ಜಿ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲರ ಪರಿಶ್ರಮದಿಂದ:

‘ನಿತ್ಯವೂ ಶಾಲೆ ಅವಧಿಯಲ್ಲಿ ಈ ಕಾರಂಜಿಯಿಂದ ಹೊರಹೊಮ್ಮುವ ಜುಳುಜುಳು ಸದ್ದನ್ನು ಕೇಳಿಕೊಂಡೇ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮಕ್ಕಳು, ಶಿಕ್ಷಕರು ಹಾಗೂ ಬಿಸಿಯೂಟದ ಸಿಬ್ಬಂದಿ ಒಂದಿಷ್ಟು ಹೊತ್ತು ಕೈತೋಟದ ನಿರ್ವಹಣೆಯನ್ನೂ ನೋಡಿಕೊಳ್ಳುವ ಕಾರಣ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಇವರೆಲ್ಲರ ದೂರದೃಷ್ಟಿ, ವಿಶಾಲ ಮನೋಭಾವ, ಪರಿಸರ ಪ್ರೇಮ ಮತ್ತು ಪರಿಶ್ರಮದ ಫಲವಾಗಿ ನಮ್ಮ ಶಾಲೆ ಸತತ 3 ಬಾರಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲೆ ಮತ್ತು ಒಮ್ಮೆ ತಾಲ್ಲೂಕು ಮಟ್ಟದ ಆದರ್ಶ ಶಾಲೆ ಎಂಬ ಗೌರವಕ್ಕೆ ಪಾತ್ರವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.