
ಬೆಳಗಾವಿ: ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಮ್ಯಾಗ್ನೆಟ್ ಶಾಲೆ ಯೋಜನೆಯಡಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿರುವ ಕ್ರಮ ಕೈಬಿಡಬೇಕು ಎಂದು ಆಗ್ರಹಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ, ಇಲ್ಲಿನ ರಾಣಿ ಚನ್ನಮ್ಮ ವತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರಿನ ಕೆಪಿಎಸ್ ಶಾಲೆಯಡಿ 6 ಕಿ.ಮೀ ವ್ಯಾಪ್ತಿಯೊಳಗಿನ 77, 82, 31, 100, 20 ಮತ್ತು 80 ವಿದ್ಯಾರ್ಥಿಗಳಿರುವ 6 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಈಗಾಗಲೇ ಆದೇಶ ನೀಡಲಾಗಿದೆ. ಇದು ಶಾಲೆಗಳನ್ನು ಮುಚ್ಚುವ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೇ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಕುರಿತಾಗಿ ಹೊರಡಿಸಿರುವ ಸರ್ಕಾರದ ನಡವಳಿಗಳು ಸ್ಪಷ್ಟವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದಾಗಿ ಉಲ್ಲೇಖಿಸಿವೆ. ಇದು ಸರಿಯಾದ ನಿರ್ಣಯವಲ್ಲ ಎಂದು ಖಂಡಿಸಿದರು.
ಸಚಿವರು ವಿಲೀನದ ನೆಪದಲ್ಲಿ ಮುಚ್ಚುವ ಶಾಲಾ ಕಟ್ಟಡಗಳನ್ನು ಸಂಘ– ಸಂಸ್ಥೆಗಳ ಇತರ ಕೆಲಸಗಳಿಗೆ ನೀಡಲು ಮುಂದಾಗಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸುವುದಾಗಿ ಹೇಳಿದ್ದಾರೆ. ಜೊತೆಗೆ, ಸರ್ಕಾರಿ ಶಾಲೆಗಳಿಗಾಗಿ ಆದಾಯ ಸಂಗ್ರಹಿಸಲು ಶಾಲೆಗಳ ಗೋಡೆಯ ಮೇಲೆ ಜಾಹೀರಾತಿಗೆ ಅವಕಾಶ ನೀಡುವ ಸರ್ಕಾರದ ನಡೆ ಸಂಪೂರ್ಣ ಖಾಸಗೀಕರಣಕ್ಕೆ ನಾಂದಿ ಹಾಡಲಿದೆ. ಇದನ್ನು ಕೈ ಬಿಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಅಜಯ್ ಕಾಮತ್, ಉಪಾಧ್ಯಕ್ಷೆ ಅಭಯಾ ದಿವಾಕರ್, ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ, ಕಚೇರಿ ಕಾರ್ಯದರ್ಶಿ ಮಹಾಂತೇಶ್, ಇಂಡಾಲ್ ನಗರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ರಾಮು, ಕಾರ್ಯದರ್ಶಿ ತಾರಾ ಕುಲಕರ್ಣಿ, ಸಿಂಧೊಳ್ಳಿ ಗ್ರಾಮದ ಪಂಚಾಯಿತಿ ಅಧ್ಯಕ್ಷ ಸತೀಶ್ ಶಾಪುರ್ಕರ್, ಎಸ್‌ಡಿಎಂಸಿ ಅಧ್ಯಕ್ಷ ಮಹಾಲಿಂಗರಾಯ ಶಾಪುರ್ಕರ ಹಲವರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.