ADVERTISEMENT

‘ವಿದ್ಯಾರ್ಥಿ–ವಿಜ್ಞಾನಿ’ ಸಂವಾದ | ವಿಜ್ಞಾನದ ಪ್ರಗತಿಯೇ ದೇಶದ ಪ್ರಗತಿ: ಹಿರಿಯಣ್ಣ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 15:49 IST
Last Updated 19 ಜನವರಿ 2024, 15:49 IST
ಬೆಳಗಾವಿಯ ಸಿದ್ಧರಾಮೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ–ವಿಜ್ಞಾನಿ ಸಂವಾದ ಕಾರ್ಯಕ್ರಮವನ್ನು ಅಲ್ಲಮಪ್ರಭು  ಸ್ವಾಮೀಜಿ ಉದ್ಘಾಟಿಸಿದರು
ಬೆಳಗಾವಿಯ ಸಿದ್ಧರಾಮೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ–ವಿಜ್ಞಾನಿ ಸಂವಾದ ಕಾರ್ಯಕ್ರಮವನ್ನು ಅಲ್ಲಮಪ್ರಭು  ಸ್ವಾಮೀಜಿ ಉದ್ಘಾಟಿಸಿದರು   

ಬೆಳಗಾವಿ: ‘ಯಾವುದೇ ರಾಷ್ಟ್ರ ಅಭಿವೃದ್ಧಿಪಥದತ್ತ ಸಾಗಬೇಕಾದರೆ, ವಿಜ್ಞಾನ ರಂಗ ಮೊದಲು ಅಭಿವೃದ್ಧಿ ಹೊಂದಬೇಕು. ವಿಜ್ಞಾನ ಪ್ರಗತಿಯೇ ದೇಶದ ಪ್ರಗತಿ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಹಿರಿಯ ವಿಜ್ಞಾನಿ ಎಸ್‌.ಹಿರಿಯಣ್ಣ ಹೇಳಿದರು.

ಇಲ್ಲಿನ ಸಿದ್ಧರಾಮೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ರಾಜ್ಯ ವಿಜ್ಞಾನ ಪರಿಷತ್‌, ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ‍ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ಹಾಗೂ ‘ವಿದ್ಯಾರ್ಥಿ–ವಿಜ್ಞಾನಿ’ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಜ್ಞಾನ ಕ್ಷೇತ್ರ ಪ್ರಗತಿ ಸಾಧಿಸಿದರೆ, ದೇಶದ ಜನರ ಜೀವನದ ಗುಣಮಟ್ಟವೂ ಸುಧಾರಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಭಾರತವು ವಿಜ್ಞಾನ ರಂಗದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದು, 2035ಕ್ಕೆ ಬಾಹ್ಯಾಕಾಶದಲ್ಲಿ ತನ್ನದೇ ಆದ ‘ಸ್ಪೇಷ್‌ ಸ್ಪೇಷನ್‌’ ಹೊಂದಲಿದೆ. 2040ಕ್ಕೆ ಚಂದ್ರನ ಮೇಲೆ ಭಾರತೀಯರು ಕಾಲಿಡಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಸರ್ಕಾರವೇ ವಿದ್ಯಾರ್ಥಿ–ವಿಜ್ಞಾನಿ ಸಂವಾದ ಕಾರ್ಯಕ್ರಮ ನಿಲ್ಲಿಸಿದೆ. ಆದರೆ, ಜಿಲ್ಲೆಯ ವಿದ್ಯಾರ್ಥಿಗಳು ವೈಜ್ಞಾನಿಕ ಜ್ಞಾನದಿಂದ ವಂಚಿತರಾಗಬಾರದೆಂದು ಅಲ್ಲಮಪ್ರಭು ಸ್ವಾಮೀಜಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದರು.

ನಿವೃತ್ತ ವಿಜ್ಞಾನಿ ಎನ್‌.ಎಸ್‌.ಕುಮಾರ್‌, ‘ಈಗ ವಿಜ್ಞಾನ ರಂಗ ಸಾಕಷ್ಟು ಬೆಳೆಯುತ್ತಿದೆ. ಇದರಲ್ಲಿ ವಿಪುಲವಾದ ಅವಕಾಶಗಳೂ ಇವೆ. ಹಾಗಾಗಿ ವಿದ್ಯಾರ್ಥಿಗಳು ಪದವಿಪೂರ್ವ ಹಾಗೂ ಪದವಿ ಶಿಕ್ಷಣದ ಹಂತದಲ್ಲಿ ಮೂಲವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬೇಕು. ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು’ ಎಂದು ಕರೆಕೊಟ್ಟರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಮಾಜ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದರು.

ಬೆಳಗಾವಿ ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜ್ಯುಕೇಷನ್‌ ಕಾರ್ಯದರ್ಶಿ ಕೆ.ಬಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸಿದ್ದರಾಮ ರೆಡ್ಡಿ, ಪ್ರಭು ಶಿವನಾಯ್ಕ ಇದ್ದರು. ಸಪ್ನಾ ಜೋಶಿ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು. ಪವಿತ್ರಾ ಪಾಟೀಲ ವಂದಿಸಿದರು. ಬೆಳಗಾವಿ ನಗರ ಹಾಗೂ ಗ್ರಾಮೀಣ ವಲಯಗಳ 500 ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.