ADVERTISEMENT

‘ಜ್ಞಾನ ಧಾರೆ’ ಎರೆಯುತ್ತಿರುವ ಶ್ವೇತಾ

ಸುಧಾಕರ ಎಸ್.ತಳವಾರ, ಬೆಂಗಳೂರು
Published 8 ಮಾರ್ಚ್ 2020, 10:59 IST
Last Updated 8 ಮಾರ್ಚ್ 2020, 10:59 IST
ಶ್ವೇತಾ ಬೀಡಿಕರ
ಶ್ವೇತಾ ಬೀಡಿಕರ   

ಚಿಕ್ಕೋಡಿ: ಕೆಎಎಸ್ ಅಧಿಕಾರಿ ಆಗಬೇಕು ಎಂದು ಪ್ರೌಢಶಾಲಾ ಶಿಕ್ಷಣ ಹಂತದಿಂದಲೇ ಕನಸು ಕಂಡಿದ್ದ ವಿದ್ಯಾರ್ಥಿನಿ ನಿರಂತರ ಪ್ರಯತ್ನದಿಂದ ಗುರಿ ಮುಟ್ಟಿದ ಸಾಧಕಿಯಾಗಿ ಹೊರಹೊಮ್ಮಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎರಡು ಬಾರಿ ವೈಫಲ್ಯ ಕಂಡರೂ ಛಲ ಬಿಡದೆ ಮೂರನೇ ಬಾರಿಗೆ ಕನಸನ್ನು ಸಾಕಾರಗೊಳಿಸಿಕೊಂಡು ಮಾದರಿಯಾಗಿದ್ದಾರೆ. ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಅವರೇ, ಪಟ್ಟಣದ ಶ್ವೇತಾ ಮೋಹನ ಬೀಡಿಕರ. ಅವರ ಸಾಧನೆಯ ಮಾರ್ಗ ನಡುವೆ ಸಾಕಷ್ಟು ಕಷ್ಟದ ದಿನಗಳು ಎದುರಿಸಿದ್ದಾರೆ. ಅದು ಅವರನ್ನು ಗಟ್ಟಿಗಿತ್ತಿಯನ್ನಾಗಿಸಿದೆ. ಜೊತೆಗೆ ಮಾದರಿ ಮಹಿಳೆಯನ್ನಾಗಿ ರೂಪುಗೊಳಿಸಿದ್ದು, ದೃಢ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ.

ಚಿಕ್ಕೋಡಿಯಲ್ಲಿ ಪೋಸ್ಟಲ್ ಅಸಿಸ್ಟಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ವೇತಾ ಅವರು 2017ರಲ್ಲಿ ನಡೆದ ಕೆಎಎಸ್ ಪರೀಕ್ಷೆಯಲ್ಲಿ 28ನೇ ರ‍್ಯಾಂಕ್‌ ಗಳಿಸಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಯಾವುದೇ ರೀತಿಯ ಕೋಚಿಂಗ್ ಪಡೆಯದೇ ಉನ್ನತ ಸಾಧನೆ ಮಾಡಿ ಗಮನಸೆಳೆದಿದ್ದಾರೆ. ಚಿಕ್ಕೋಡಿಯ ಚಂದ್ರಶೇಖರ ಚಿನಕೇಕರ ಅವರ ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ವಿವಿಧ ಶಾಲೆ-ಕಾಲೇಜುಗಳಿಗೆ ತೆರಳಿ ಯುವ ಜನರಲ್ಲಿ ಕೌಶಲ ಅಭಿವೃದ್ಧಿ ತರಬೇತಿ ನೀಡುತ್ತಿದ್ದಾರೆ. ಈ ಭಾಗದಿಂದ ಇನ್ನಷ್ಟು ಜನ ಯುವಕ-ಯುವತಿಯರು ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂಬುದೇ ಅವರ ಆಶಯವಾಗಿದೆ.

ADVERTISEMENT

‘ಇಂದು ಜ್ಞಾನ ಜಗತ್ತನ್ನು ಆಳುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಟ್ಟ ಗುರಿಯನ್ನು ಸಾಧಿಸುವುದು ಕಷ್ಟವೇ. ಯುವ ಪೀಳಿಗೆ ತಮ್ಮಲ್ಲಿರುವ ಜ್ಞಾನವನ್ನು ಬಳಸಿಕೊಳ್ಳಬೇಕು. ಪರಿಶ್ರಮ, ತರಬೇತಿ ಮೂಲಕ ರೆಕ್ಕೆ ಕಟ್ಟಿಕೊಂಡು ಹಾರಬೇಕು. ಸ್ತ್ರೀ ಎನ್ನುವುದೇ ಒಂದು ದೊಡ್ಡ ಶಕ್ತಿ. ಪ್ರಸ್ತುತ ಸಮಾಜದ ಮುಖ್ಯವಾಹಿನಿಯಲ್ಲಿ ಸ್ತ್ರೀ ಪುರುಷರು ಸಮಾನರಂತೆ ಕೆಲಸ ಮಾಡುತ್ತಿರುವುದು ಒಂದು ಬದಲಾವಣೆಯ ಮುನ್ನುಡಿಯೇ ಆಗಿದೆ’ ಎನ್ನುತ್ತಾರೆ ಅವರು.

‘ಮಹಿಳೆ ತನ್ನ ಇರುವಿಕೆಯನ್ನು ತಾನು ಕಂಡುಕೊಳ್ಳಬೇಕು. ಅದಕ್ಕಾಗಿ ಅಧ್ಯಯನ ಮಾಡಬೇಕು. ಸರ್ಕಾರಿ ನೌಕರಿ ಪಡೆದು ಸ್ವಾವಲಂಬಿಯಾಗಿ ಬದುಕುವ ಛಲ ಹೊಂದಬೇಕು. ಅಲ್ಲದೇ ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಬಳಸಿಕೊಂಡು ಕೌಶಲ ಅಭಿವೃದ್ಧಿಗೊಳಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಸಮಾಜ ಮತ್ತು ಸರ್ಕಾರವು ಮಹಿಳೆಯರು ಸಬಲರಾಗಲು ಹಲವಾರು ಅವಕಾಶಗಳನ್ನು ನೀಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂಬ ಸಲಹೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.