
ಕಾಗವಾಡ: ಕರ್ನಾಟಕ– ಮಹಾರಾಷ್ಟ್ರ ಗಡಿಯಲ್ಲಿರುವ ಐನಾಪುರದಲ್ಲಿ ಜ.14 ಮಕರ ಸಂಕ್ರಮಣ ದಿನದಿಂದ ಸತತ ಐದು ದಿನಗಳ ವರೆಗೆ ಜರುಗಲಿರುವ ಜಾತ್ರೆಯಲ್ಲಿ ಜಾನುವಾರುಗಳ ಮಾರಾಟ ಬ್ರಹತ್ ಕೃಷಿ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಈ ಗ್ರಾಮದ ಸಿದ್ದೇಶ್ವರ ದೇವಸ್ಥಾನಕ್ಕೆ 12ನೇ ಶತಮಾನದ ಇತಿಹಾಸವಿದೆ. ಈಗಿನ ಮೋಳೆ ಗ್ರಾಮದ ಭೋಗಸಿದ್ಧನು ದತ್ತು ಪುತ್ರನ ಹುಡುಕಾಟದಲ್ಲಿ ಇದ್ದ. ಶಿಂಗಣಾಪೂರಕ್ಕೆ ಹೋದ ತನ್ನ ಪತ್ನಿಯ ಪ್ರೇಮ ಪರಿಪಾಲನೆಯ ಪರೀಕ್ಷೆ ಅದಾಗಿತ್ತು. ಇಂದಾಪೂರದ ಬಳೋಗ ಸಿದ್ಧನ 8 ಮಕ್ಕಳಲ್ಲಿ ಕಿರಿಯ ಮಗನನ್ನು ದತ್ತು ಪಡೆಯಲು ಓಗಸಿದ್ಧ ಅಪೇಕ್ಷೆ ಪಟ್ಟ. ಅಪೇಕ್ಷೆ ವ್ಯಕ್ತಪಡಿಸಿದಾಗ ಓಗಸಿದ್ಧ ದಂಪತಿಯ ಒತ್ತಾಯದಿಂದ ಕಿರಿಯ ಮಗನನ್ನು ತೆಗೆದುಕೊಂಡು ಕಾಗವಾಡ ತಾಲ್ಲೂಕಿಗೆ ಬಂದ. ಅವನ ಹಿಂದೆಯೇ ಬಳೋಗ ಸಿದ್ದ ದಂಪತಿ ಬಂದರು.
ಐನಾಪೂರದ ಕೆರೆಯ ಸಮೀಪಕ್ಕೆ ಬಂದಾಗ ಇಬ್ಬರ ನಡುವೆ ಪುತ್ರನಿಗಾಗಿ ತೀವ್ರ ವಾಗ್ವಾದ ನಡೆಯಿತು. ಓಗಸಿದ್ಧನು ಪುತ್ರನನ್ನು ಐನಾಪೂರದ ಕೆರೆಯಲ್ಲಿ ಎಸೆದ. ಆದರೂ ಆತ ಬದುಕಿ ದಂಪತಿ ಮಡಿಲು ಸೇರಿದ. ಈ ಘಟನೆ ಆಧರಿಸಿ ಸಂಕ್ರಾಂತಿಯಲ್ಲಿ ಓಗಿ– ಭೋಗಿ ಆಚರಿಸುವುದು ರೂಢಿ ಎನ್ನುತ್ತಾರೆ ಹಿರಿಯರು. ಪವಾಡದ ನೆನಪಿಗಾಗಿ ಐನಾಪೂರದಲ್ಲಿ ಐದು ದಿನಗಳ ವರೆಗೆ ಜಾತ್ರೆ ಹಮ್ಮಿಕೊಳ್ಳುತ್ತಾರೆ.
ಗ್ರಾಮದ ಜನ ಹಾಗೂ ಭಕ್ತಾದಿಗಳು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಉದಾರ ದೇಣಿಗೆ ನೀಡಿ, ಆಕರ್ಷಕ ಮಂದಿರ ನಿರ್ಮಾಣ ಗೊಳಿಸಿದ್ದಾರೆ. 1970ರಿಂದ ಇಲ್ಲಿಯವರೆಗೆ ಮಹೋತ್ಸವಗಳು ನಡದುಬಂದಿವೆ. ಮೂರನೇ ಶ್ರಾವಣ ಸೋಮವಾರ ಒಂದು ದಿನ ಜಾತ್ರೆ ಜರುಗುವುದು ವಿಶೇಷ.
ಕೃಷಿ ಮೇಳ
ಇಂದಿನಿಂದ ಐನಾಪುರದ ಸಿದ್ದೇಶ್ವರ ದೇವರ 56 ನೇ ಜಾತ್ರಾ ಮಹೋತ್ಸವ ಜ.14ರಿಂದ 18ರವರೆಗೆ ನಡೆಯಲಿದೆ. ಭವ್ಯ ದನಗಳ ಜಾತ್ರೆ ಮತ್ತು ಬೃಹತ ಕೃಷಿ ಪ್ರದರ್ಶನ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಉದ್ಘಾಟನೆ ನೆರವೇರುವುದು. ಸಂಜೆ 6 ಗಂಟೆಗೆ 11 ಗ್ರಾಮಗಳ ಸತ್ಯಸಿದ್ದರ ಭೇಟಿ ಕಾರ್ಯಕ್ರಮ ನಡೆಯಲಿದೆ. ಜ.15 ರಂದು ಬೆಳಿಗ್ಗೆ 10ಕ್ಕೆ ಕುದುರೆಗಾಡಿ ಶರ್ಯತ್ತು ಶ್ವಾನ ಪ್ರದರ್ಶನ ಏ.16ರಂದು 10ಕ್ಕೆ ಕಲ್ಲು ಎತ್ತುವ ಸ್ಪರ್ಧೆ 17ರಂದು ಒಂದು ಕುದುರೆ– ಒಂದು ಎತ್ತಿನ ಗಾಡಿ ಶರ್ಯತ್ತು 18ರಂದು ಬಿಳಿ ದನಗಳ ಪ್ರದರ್ಶನ ನಡೆಯಲಿದೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷ ದಾದಾಸಾಹೇಬ ಜಂತೆನ್ನವರ ಉಪಾಧ್ಯಕ್ಷ ಸಂತೋಷ ಪಾಟೀಲ ಕುಮಾರ ಅಪರಾಜ ಅಣ್ಣಾಸಾಬ ತ್ಯಾತಾಸಾಬ ಡೂಗನವರ ಕೋರ್ಬು ಅಣ್ಣಾಸಾಬ ಜಾಧವ ಗೋಪಾಲ ಮಾನಗಾಂವೆ ಬಾಳು ಮಡಿವಾಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.