ಬೆಳಗಾವಿ: ರಾಜ್ಯದಲ್ಲಿ ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳ ಉಳಿವಿಗಾಗಿ ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‌ಒ) ಕಾರ್ಯಕರ್ತರು ಭಾನುವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳನ್ನು ಸಂಘಟನೆ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹಿಡಿದು, ಸಾರ್ವಜನಿಕರಿಂದ ಸಹಿ ಸಂಗ್ರಹಿಸಿದರು.
ಎಐಡಿಎಸ್‌ಒ ಜಿಲ್ಲಾ ಘಟಕದ ಸಂಚಾಲಕ ಮಹಾಂತೇಶ ಬಿಳೂರ, ‘ಕಡಿಮೆ ದಾಖಲಾತಿ ಇರುವ 6 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಸರ್ಕಾರ ತಂತ್ರ ರೂಪಿಸಿದೆ. ಮಕ್ಕಳ ದಾಖಲಾತಿ ಕುಸಿತಕ್ಕೆ ಕಾರಣ ಪತ್ತೆಹೆಚ್ಚಿ ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸುವ ಬದಲಿಗೆ, ವಿಲೀನಕ್ಕೆ ಮುಂದಾಗಿದ್ದು ಸರಿಯಲ್ಲ. ಸರ್ಕಾರದ ಈ ನಡೆ ವಿರೋಧಿಸಿ ರಾಜ್ಯವಿಡೀ 50 ಲಕ್ಷ ಜನರಿಂದ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ’ ಎಂದರು.
‘ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುವ ಬದಲಿಗೆ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿಲ್ಲ ಎಂದು ಪಾಲಕರ ಮೇಲೆಯೇ ಗೂಬೆ ಕೂರಿಸುತ್ತಿದೆ’ ಎಂದು ದೂರಿದರು.
ಹನುಮಂತ ಯರಗುದ್ದಿ, ಶಿವಾನಂದ ಕಿಲಾರಿ, ರಾಘವೇಂದ್ರ ಪೂಜೇರಿ, ಜೀವನ್, ಪ್ರಜ್ವಲ್ ಇದ್ದರು.
ಹಂತ–ಹಂತವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಹುನ್ನಾರ ಇದಾಗಿದೆಮಹಾಂತೇಶ ಬಿಳೂರ ಜಿಲ್ಲಾ ಘಟಕದ ಸಂಚಾಲಕ ಎಐಡಿಎಸ್‌ಒ
‘ಜನವಿರೋಧಿ ನೀತಿ ಇದಾಗಿದೆ’
‘ಶೈಕ್ಷಣಿಕ ವೆಚ್ಚ ಈಗಾಗಲೇ ಗಗನಕ್ಕೇರಿವೆ. ತಾನು ಬಡವರ ಪರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಇದಾಗಿದೆ. ಸರ್ಕಾರ ತಕ್ಷಣವೇ ತನ್ನ ನಿಲುವು ಬದಬಲಿಸಿ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಬೇಕು. ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಕಾರ್ಯಕರ್ತರು ಎಚ್ಚರಿಕೆ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.