ADVERTISEMENT

ಎಸ್‌ಐಆರ್‌ ಸಂಬಂಧ ರಾಜಕೀಯ ಇಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 23:30 IST
Last Updated 20 ಜನವರಿ 2026, 23:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಳಗಾವಿ: ‘ಚುನಾವಣೆ ಆಯೋಗವು ನಡೆಸುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜಕೀಯ ಮಾಡುವುದಿಲ್ಲ. ಆದರೆ, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂಬುದಷ್ಟೇ ನಮ್ಮ ಕಾಳಜಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿ ಜಿಲ್ಲೆಯ ನಂದಗಡದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಸ್‌ಐಆರ್ ಪ್ರಕ್ರಿಯೆಯಂತೆ ರಾಜ್ಯದ 3 ಕೋಟಿ ಮತದಾರರು ‘ಮ್ಯಾಪ್’ ಆಗಿಲ್ಲ ಎಂದು ತಿಳಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆ ಎಚ್ಚರಿಕೆಯಿಂದ ನಡೆಯಬೇಕಿದೆ’ ಎಂದು ಹೇಳಿದರು.

‘ಅರ್ಹ ಮತದಾರರಿಗೆ ಅನ್ಯಾಯ ಆಗದಂತೆ ಕಾರ್ಯನಿರ್ವಹಿಸುವಂತೆ ಬಿಎಲ್‌ಒಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು. 

ADVERTISEMENT

ಜ.21ರಂದು ಗಡಿ ವಿವಾದದ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಒಳ್ಳೆಯ ವಕೀಲರನ್ನು ನೇಮಿಸುತ್ತೇವೆ. ಗಡಿ ವಿಚಾರದಲ್ಲಿ ಕರ್ನಾಟಕ ವಿರುದ್ಧ ಪ್ರಕರಣ ಹಾಕಲು ಮಹಾರಾಷ್ಟ್ರದವರಿಗೆ ಅವಕಾಶವೇ ಇಲ್ಲ’ ಎಂದರು.

‘ನ್ಯಾಯಾಂಗ ಮಾರ್ಗದಲ್ಲಿಯೇ ನಾವು ಸಾಗುತ್ತೇವೆ. ಗಡಿ ವಿಚಾರವು ನ್ಯಾಯಾಂಗದಡಿ ಚರ್ಚೆ ಆಗಬೇಕೆ ಅಥವಾ ಬೇಡವೇ ಎಂಬುದು ಮೊದಲು ತೀರ್ಮಾನ ಆಗಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.