ADVERTISEMENT

ಸಾಮೂಹಿಕ ಪ್ರಾರ್ಥನೆ: ಕ್ರೈಸ್ತರಲ್ಲಿ ಸಂಘಟನೆಗಳಿಂದ ದಾಳಿಯ ಆತಂಕ

ಮತಾಂತರ ಆರೋಪದ ಮೇಲೆ ಸಂಘಟನೆಗಳಿಂದ ದಾಳಿ ಭೀತಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 12:29 IST
Last Updated 30 ನವೆಂಬರ್ 2021, 12:29 IST
   

ಬೆಳಗಾವಿ: ಬಾಡಿಗೆ ಕೊಠಡಿ ಅಥವಾ ಸಭಾಂಗಣದಲ್ಲಿ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಆತಂಕಪಡುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಕೆಲವು ದಿನಗಳ ಹಿಂದೆ, ‘ಮತಾಂತರ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಮರಾಠಾ ಕಾಲೊನಿಯಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಘಟನೆಯು ಅವರ ಆತಂಕಕ್ಕೆ ಕಾರಣವಾಗಿದೆ.

‘ನಿಮ್ಮ ಹಿತದೃಷ್ಟಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ’ ಚರ್ಚ್‌ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸದ್ಯಕ್ಕೆ ಮುಂದಾಗಬೇಡಿ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಾಸ್ಟರ್‌ಗಳಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಗೊಂದಲ ಉಂಟಾಗಿದೆ.

‘ಕೆಲವು ದಿನಗಳ ಹಿಂದೆ ಇನ್‌ಸ್ಪೆಕ್ಟರ್‌ ಒಬ್ಬರು ನಮ್ಮನ್ನು ಕರೆಸಿ, ಚರ್ಚ್‌ ಹೊರತುಪಡಿಸಿ ಇತರೆಡೆ ಸಾಮೂಹಿಕ ಪ್ರಾರ್ಥನೆ ಹಮ್ಮಿಕೊಳ್ಳಬೇಡಿ ಎಂದು ಕೇಳಿಕೊಂಡಿದ್ದರು. ಇದರಿಂದಾಗಿ ಕೆಲವರು ಗುಂಪುಗಳು ಆನ್‌ಲೈನ್‌ನಲ್ಲಿ ಪ್ರಾರ್ಥನೆ ನಡೆಸುತ್ತಿವೆ. ಬಳಿಕ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ಈಗ ತೊಂದರೆ ಇಲ್ಲ’ ಎಂದು ಪಾಸ್ಟರ್‌ ಥಾಮಸ್‌ ಪ್ರತಿಕ್ರಿಯಿಸಿದರು.

ADVERTISEMENT

‘ಸಂಘಟನೆಯೊಂದರ ಕಾರ್ಯಕರ್ತರು ‍ಪ್ರಾರ್ಥನಾ ಸ್ಥಳದ ಮೇಲೆ ದಾಳಿ ನಡೆಸಿ, ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆ ಬಳಿಕ, ಚರ್ಚ್‌ ಅಥವಾ ಸ್ವಂತ ಕಟ್ಟಡಗಳಿಲ್ಲವೋ ಆ ಗುಂಪುಗಳಲ್ಲಿ ಆತಂಕ ಉಂಟಾಗಿದೆ. ವಿನಾಕಾರಣ ಆರೋಪ ಕೇಳಿಬರಬಹುದು ಎನ್ನುವ ಭೀತಿ ಅವರದಾಗಿದೆ. ಕೆಲವು ಗುಂಪುಗಳು ಸಾಮೂಹಿಕ ಪ್ರಾರ್ಥನೆ ನಿಲ್ಲಿಸಿರುವ ಮಾಹಿತಿ ಇದೆ’ ಎಂದು ಬೆಳಗಾವಿ ಮೆಥೋಡಿಸ್ಟ್‌ ಚರ್ಚ್‌ನ ಜಿಲ್ಲಾ ಸೂಪರಿಂಟೆಂಡೆಂಟ್ ನಂದಕುಮಾರ್‌ ತಿಳಿಸಿದರು.

‘ಕ್ರೈಸ್ತ ಪ್ರಾರ್ಥನಾ ಸಭಾಂಗಣ ಮೇಲೆ ಕೆಲವರು ದಾಳಿ ಮಾಡಿ ಪ್ರಾರ್ಥನೆಗೆ ಅಡ್ಡಿಪಡಿಸಿದ್ದರು. ಹೀಗಾಗಿ, ನಮಗೆ ಆತಂಕ ಉಂಟಾಗಿದೆ. ಸಾಮೂಹಿಕ ಪ್ರಾರ್ಥನೆ ವೇಳೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಧರ್ಮ ಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡೀಸ್ ನೇತೃತ್ವದಲ್ಲಿ ಕ್ರೈಸ್ತ ಧರ್ಮಗುರುಗಳು ನಗರ ಪೊಲೀಸ್ ಆಯುಕ್ತರಿಗೆ ಈಚೆಗೆ ಮನವಿ ಸಲ್ಲಿಸಿದ್ದಾರೆ.

ಸೂಚಿಸಿಲ್ಲ

ನಗರದಲ್ಲಿ ಕ್ರೈಸ್ತರು ಸಾಮಾಹಿಕ ಪ್ರಾರ್ಥನೆ ನಡೆಸದಂತೆ ಸೂಚಿಸಿಲ್ಲ. ಈ ವಿಷಯದಲ್ಲಿ ಈಗಾಗಲೇ ಧರ್ಮಗುರುಗಳಿಗೆ ಸ್ಪಷ್ಟಪಡಿಸಲಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ.

–ವಿಕ್ರಂ ಅಮಟೆ, ಡಿಸಿ‍ಪಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.