ADVERTISEMENT

ಯಾತ್ರಾ ಸ್ಥಳಗಳ ವೀಕ್ಷಣೆ; ತಾಯಿ ಜೊತೆ ಸ್ಕೂಟರ್‌ ಏರಿ ಹೊರಟ ಪುತ್ರ

ಯಾತ್ರಾ ಸ್ಥಳಗಳ ವೀಕ್ಷಣೆ;

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 12:19 IST
Last Updated 20 ಅಕ್ಟೋಬರ್ 2018, 12:19 IST
ತಾಯಿ ಚೂಡಾರತ್ನ ಜೊತೆ ಪ್ರಯಾಣಿಸುತ್ತಿರುವ ಕೃಷ್ಣಕುಮಾರ
ತಾಯಿ ಚೂಡಾರತ್ನ ಜೊತೆ ಪ್ರಯಾಣಿಸುತ್ತಿರುವ ಕೃಷ್ಣಕುಮಾರ   

ಬೆಳಗಾವಿ: ತಮ್ಮ 70 ವರ್ಷದ ತಾಯಿಗೆ ವಿವಿಧ ಯಾತ್ರಾ ಸ್ಥಳಗಳ ದರ್ಶನ ಮಾಡಿಸಬೇಕೆಂಬ ಹಂಬಲದಿಂದ ಕಳೆದ 10 ತಿಂಗಳಿನಿಂದ ಸ್ಕೂಟರ್‌ ಮೇಲೆ ಸವಾರಿ ಹೊರಟಿರುವ ಮೈಸೂರಿನ ಡಿ.ಕೃಷ್ಣಕುಮಾರ್‌ ಶನಿವಾರ ಬೆಳಗಾವಿಗೆ ಬಂದಿದ್ದಾರೆ. 2–3 ದಿನಗಳ ಕಾಲ ಇಲ್ಲಿಯೇ ಇದ್ದು, ಪಂತ ಬಾಳೇಕುಂದ್ರಿ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮುಂದಿನ ಊರಿಗೆ ಪ್ರಯಾಣ ಬೆಳೆಸಲಿದ್ದಾರೆ.

ದಕ್ಷಿಣಾಮೂರ್ತಿ ಹಾಗೂ ಚೂಡಾರತ್ನ ದಂಪತಿಯ ಏಕೈಕ ಪುತ್ರನಾಗಿರುವ, 39 ವರ್ಷದ ಕೃಷ್ಣಕುಮಾರ್‌ ಇಂತಹದೊಂದು ಯಾತ್ರೆ ಕೈಗೊಂಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದ ತಂದೆಯವರು ನಾಲ್ಕು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ. ವಿವಿಧ ಯಾತ್ರಾ ಸ್ಥಳಗಳನ್ನು ನೋಡಬೇಕೆಂದು ತಾಯಿ ಇಚ್ಛೆ ವ್ಯಕ್ತಪಡಿಸಿದಾಗ, ಕೃಷ್ಣಕುಮಾರ್‌ ಜನವರಿ 16ರಿಂದ ಯಾತ್ರೆ ಆರಂಭಿಸಿದರು.

ಎಸ್‌.ಎಸ್‌.ಎಲ್‌.ಸಿ.ವರೆಗ ಓದಿರುವ ಕೃಷ್ಣಕುಮಾರ್‌, ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ತಂದೆ ಮೃತರಾದ ನಂತರ ತಾಯಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲದಂತಾಯಿತು. ತಾಯಿ ಸೇವೆ ಮಾಡುವ ಉದ್ದೇಶದಿಂದ ಕೃಷ್ಣಕುಮಾರ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಹೊರಬಂದರು.

ADVERTISEMENT

‘ನನ್ನನ್ನು ಹೆತ್ತು, ಹೊತ್ತು ಬೆಳೆಸಿದ ತಾಯಿಗೆ ದೇಶವನ್ನು ತೋರಿಸಬೇಕೆಂಬ ಆಸೆಯಿದೆ. ನಾವು ಚಿಕ್ಕವರಿದ್ದಾಗ ಅವಿಭಕ್ತ ಕುಟುಂಬದಲ್ಲಿದ್ದೇವು. ಕುಟುಂಬದ ಎಲ್ಲ ಸದಸ್ಯರ ಬೇಕು– ಬೇಡಗಳನ್ನು ಪೂರೈಸುತ್ತಿದ್ದ ತಾಯಿಯವರು ತಮ್ಮ ಜೀವನವನ್ನು ಅಡುಗೆ ಕೋಣೆಯಲ್ಲಿಯೇ ಕಳೆದರು. ಕೊನೆಯ ಕಾಲದಲ್ಲಿಯಾದರೂ ಅವರಿಗೆ ದೇಶವನ್ನು ತೋರಿಸಬೇಕೆಂಬ ಆಸೆಯಿದೆ. ಅದಕ್ಕಾಗಿ ಯಾತ್ರೆ ಹಮ್ಮಿಕೊಂಡಿದ್ದೇನೆ’ ಎಂದು ಕೃಷ್ಣಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

‘ಮೈಸೂರಿನಲ್ಲಿ ಸಂಕ್ರಾಂತಿಯ ಮರುದಿನ ಜನವರಿ 16ರಂದು ಯಾತ್ರೆ ಆರಂಭಿಸಿದೇವು. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಮುಖಾಂತರ ಬೆಳಗಾವಿಗೆ ಬಂದಿದ್ದೇವೆ. 2–3 ದಿನ ಇಲ್ಲಿ ಇದ್ದು, ವಿವಿಧ ಯಾತ್ರಾ ಸ್ಥಳಗಳನ್ನು ವೀಕ್ಷಿಸುತ್ತೇವೆ. ನಂತರ ಗೋವಾ ಮೂಲಕ ಇತರ ಸ್ಥಳಗಳತ್ತ ತೆರಳುತ್ತೇವೆ’ ಎಂದು ಹೇಳಿದರು.

‘ನನಗೆ ಹಲವು ಊರುಗಳಲ್ಲಿ ಸ್ನೇಹಿತರು ಇದ್ದಾರೆ. ಅವರ ಮನೆಯಲ್ಲಿ ತಂಗುತ್ತೇನೆ. ಇಲ್ಲದಿದ್ದರೆ, ಆಶ್ರಮಗಳು, ದೇವಸ್ಥಾನಗಳಲ್ಲಿ ವಾಸ್ತವ್ಯ ಮಾಡುತ್ತೇನೆ. ಹೋಟೆಲ್‌ ಊಟ ಮಾಡುವುದಿಲ್ಲ, ಆಹಾರವನ್ನು ನಾವೇ ತಯಾರಿಸಿಕೊಳ್ಳುತ್ತೇವೆ. ಇದುವರೆಗೆ ನಮಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ನುಡಿದರು.

‘ಇದಕ್ಕಿಂತ ಮೊದಲು ಕಳೆದ ವರ್ಷ ನಾನು ತಾಯಿಯನ್ನು ಕರೆದುಕೊಂಡು ಉತ್ತರ ಭಾರತ ಪ್ರವಾಸ ಮಾಡಿದ್ದೆ. ಸುಮಾರು ಎರಡು ತಿಂಗಳು ಕಾರಿನಲ್ಲಿ ಪ್ರವಾಸ ಮಾಡಿದ್ದೇವು. ಈ ಸಲ ತಂದೆಯವರು ಖರೀದಿಸಿದ್ದ ಸ್ಕೂಟರ್‌ ಏರಿ ಪ್ರವಾಸಕ್ಕೆ ಹೊರಟಿರುವುದು ವಿಶೇಷ. ಇನ್ನೂ ಒಂದೆರಡು ತಿಂಗಳು ಪ್ರವಾಸ ಮುಂದುವರಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.